ಬೆಳಗಾವಿ: ಮಹಾನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ. ವರುಣಾರ್ಭಟದಿಂದ ಶವ ಸಾಗಾಟಕ್ಕೂ ಜನರು ತೊಂದರೆ ಅನುಭವಿಸಿದ ಘಟನೆ ಗುರುವಾರ ನಡೆಯಿತು.
ಇಲ್ಲಿನ ಅಮನ್ ನಗರದ ಮೆಹಬೂಬಿ ಆದಂಸಾಹೇಬ ಮಕಾಂದಾರ್ (90) ಎಂಬವರು ಮನೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಇವರ ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸಲು ಒಂದೆಡೆ ಸರಿಯಾದ ರಸ್ತೆ ಇಲ್ಲದೇ ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಟುಂಬಸ್ಥರು ಪರದಾಡಿದರು. ಕೊನೆಗೆ, ಅಂಜುಮನ್ ಸಂಸ್ಥೆಯ ಸಹಾಯದಿಂದ ಮೊಣಕಾಲುದ್ದ ನಿಂತ ನೀರಿನಲ್ಲೇ ಮಹಿಳೆಯ ಮೃತದೇಹವನ್ನು ಕೊಂಡೊಯ್ದರು.
ಬಾಣಂತಿಯರ ಪರದಾಟ:ತಾಲೂಕಿನ ಪೀರನವಾಡಿಯ ಪಾಟೀಲ ಗಲ್ಲಿಯಲ್ಲಿ ಇಬ್ಬರು ಬಾಣಂತಿಯರು ವಾಸವಿದ್ದ ಮನೆಗೂ ಮಳೆ ನೀರು ನುಗ್ಗಿದೆ. ಎರಡು ದಿನಗಳಿಂದ ಮನೆಯಲ್ಲಿನ ನೀರು ಹೊರ ಹಾಕಲು ಕುಟುಂಬ ಸದಸ್ಯರು ಹರಸಾಹಸಪಟ್ಟರು. ಬಾಣಂತಿಯರು ಹಾಗೂ ನವಜಾತ ಶಿಶುಗಳನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ. ನಾಗಲಿಂಗ ಹಿರೇಮಠ ಎಂಬವರ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಈ ಹಿಂದೆ ಇದೇ ಮನೆಯ ಗೋಡೆ ಕುಸಿದು ನಾಗಲಿಂಗ ಹಿರೇಮಠ ಅವರ ತಾಯಿ ಮೃತಪಟ್ಟಿದ್ದರು.