ಕರ್ನಾಟಕ

karnataka

ETV Bharat / state

ಬೆಂಗಳೂರು ಕೇಂದ್ರದಲ್ಲಿ ಮತದಾನ ಗೌಪ್ಯತೆ ಉಲ್ಲಂಘನೆ ಆಗಿಲ್ಲ: ರಾಜ್ಯ ಮುಖ್ಯ ಚುನಾವಣಾಧಿಕಾರಿ - Senior Citizens Voting - SENIOR CITIZENS VOTING

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ಮತದಾನದ ವೇಳೆ ಯಾವುದೇ ಗೌಪ್ಯತೆಯ ಉಲ್ಲಂಘನೆ ಆಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

no-violation-of-voting-privacy-at-bengaluru-central-constituency-says-karnataka-chief-electoral-officer
ಬೆಂಗಳೂರು ಕೇಂದ್ರದಲ್ಲಿ ಮತದಾನ ಗೌಪ್ಯತೆ ಉಲ್ಲಂಘನೆ ಆಗಿಲ್ಲ: ರಾಜ್ಯ ಮುಖ್ಯ ಚುನಾವಣಾಧಿಕಾರಿ

By ETV Bharat Karnataka Team

Published : Apr 14, 2024, 4:24 PM IST

ಬೆಂಗಳೂರು:ನಿನ್ನೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ಮತದಾನದ ಸಮಯದಲ್ಲಿ ಮತದಾನದ ಗೌಪ್ಯತೆ ಮತ್ತು ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳು ನಡೆದಿವೆ ಎಂದು ಆರೋಪಿಸಿ ಅಭ್ಯರ್ಥಿ ಪರ ಏಜೆಂಟ್​ವೊಬ್ಬರು ನೀಡಿದ್ದ ದೂರನ್ನು ಕೂಲಕಂಷವಾಗಿ ಪರಿಶೀಲಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲೂ ಮತದಾನದ ಗೌಪ್ಯತೆ ಉಲ್ಲಂಘನೆ ಆಗಿಲ್ಲ. ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳೂ ನಡೆದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಾಜಿನಗರದ ವಾರ್ಡ್‌ ಸಂಖ್ಯೆ 108ರ ಶ್ರೀರಾಮಮಂದಿರ ಸಮೀಪ ನಿನ್ನೆ 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರ ಮತದಾನದ ವೇಳೆ ಗೌಪ್ಯತೆ ಕಾಪಾಡಿಕೊಳ್ಳಲಾಗಿಲ್ಲ ಮತ್ತು ಮತದಾರರಿಗೆ ಪ್ರಭಾವ ಬೀರಲಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಏಜೆಂಟರು ದೂರು ನೀಡಿದ್ದರು. ಈ ಬಗ್ಗೆ ತುರ್ತಾಗಿ ತನಿಖೆ ನಡೆಸಿ ವರದಿಯನ್ನು ನೀಡುವಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿರುವ ಜಿಲ್ಲಾ ಚುನಾವಣಾಧಿಕಾರಿಗಳು ವರದಿಯನ್ನು ನೀಡಿದ್ದಾರೆ. ಈ ವರದಿಯಲ್ಲಿ ವಿಡಿಯೋ ಚಿತ್ರೀಕರಣ, ಛಾಯಾಚಿತ್ರಗಳ ಪರಿಶೀಲನೆ ಹಾಗೂ ಮೈಕ್ರೋ ಅಬ್ಸರ್ವರ್‌ ಅವರ ವರದಿಯ ಆಧಾರದ ಮೇಲೆ ಮತದಾನದ ಗೌಪ್ಯತೆಯ ಉಲ್ಲಂಘನೆ ಆಗಿಲ್ಲ. ಜೊತೆಗೆ ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳು ಆಗಿಲ್ಲ ಎಂದು ತಿಳಿಸಿದ್ದಾರೆ.

ಒಂದು ಮನೆಯಿಂದ ಇನ್ನೊಂದು ಮನೆಗೆ ಮತದಾನದ ಪ್ರಕ್ರಿಯೆ ಮಾಡುವಾಗ ಪಿಆರ್‌ಒ ಅವರ ಚುನಾವಣಾ ಗುರುತಿನ ಚೀಟಿ ಕಳೆದುಹೋಗಿದ್ದು, ಇನ್ನುಳಿದ ಪೋಲಿಂಗ್‌ ಅಧಿಕಾರಿಗಳು ಗುರುತಿನ ಚೀಟಿಯನ್ನು ಧರಿಸಿಕೊಂಡೇ ಕರ್ತವ್ಯ ನಿರ್ವಹಿಸಿದ್ದಾರೆ. ಪಿಆರ್‌ಒ ಅವರಿಗೆ ತಕ್ಷಣ ಮತ್ತೊಂದು ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಮತದಾನದ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಗಳನ್ನು ನಿಯಮಾನುಸಾರ ನಿರ್ವಹಿಸಲಾಗಿದೆ. ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಹಾಗೂ ಯಾವುದೇ ಪಕ್ಷದ ಚುನಾವಣೆ ಅಭ್ಯರ್ಥಿಗಳ ಏಜೆಂಟರ್‌ಗಳ ಜೊತೆಗೂಡಿ ಮತದಾರರಿಗೆ ಪ್ರಭಾವ ಬೀರುವಂತಹ ಪ್ರಕ್ರಿಯೆಗಳು ನಡೆದಿಲ್ಲ. ಈ ಬಗ್ಗೆ ವಿಡಿಯೋ ತುಣುಕುಗಳಿಂದ ಖಚಿತಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ದೂರುದಾರರು ಹೇಳಿರುವಂತೆ ಯಾವುದೇ ಮತದಾನದ ಅಧಿಕಾರಿ, ನೌಕರರು, ಕಂದಾಯ ನಿರೀಕ್ಷಕರು ಹಾಗೂ ಮೈಕ್ರೋ ಅಬ್ಸರ್ವರ್​​​ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಂಶಗಳು ಕಂಡುಬಾರದೇ ಇರುವುದರಿಂದ ದೂರುದಾರರ ಅರ್ಜಿಗಳನ್ನು ಮುಕ್ತಾಯಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಾರಿ‌ ಗೆದ್ದ ಸಂಸದರು ನಾಲ್ವರು: 7 ಸಲ ಗೆದ್ದು ಇತಿಹಾಸ ನಿರ್ಮಿಸಿದ್ದ ಬಿ.ಶಂಕರಾನಂದ

ABOUT THE AUTHOR

...view details