ಶಿವಮೊಗ್ಗ:"ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಸಂಘರ್ಷ ಮಾಡದೇ, ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಹಕಾರ ಬಯಸಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಬಂಧ ಉತ್ತಮವಾಗಿರುತ್ತದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದ ಅಭಿವೃದ್ಧಿಗಿಂತ ಬೇರೆ ವಿಚಾರಗಳಿಗೆ ಹೆಚ್ಚಿನ ಆದ್ಯಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷದ ಅವಧಿ ಕೊನೆಯ ದಿನಗಳಲ್ಲಿ ವೈಪಲ್ಯದ ಬಗ್ಗೆ ಚರ್ಚೆ ನಡೆದರೆ, ರಾಜ್ಯ ಸರ್ಕಾರದ ವಿಚಾರದಲ್ಲಿ ಮೊದಲೇ ಪ್ರಾರಂಭವಾಗಿದೆ. ಸರ್ಕಾರದ ಅಕ್ರಮಗಳ ಹಾಗೂ ಹಗರಣಗಳ ಕುರಿತು ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಗೆ ಮತ ನೀಡಿದರೆ ಬದಲಾವಣೆ ಆಗಬಹುದು ಎಂದು ರಾಜ್ಯದ ಜನ ಕಾಂಗ್ರೆಸ್ಗೆ ಒಂದು ಅವಕಾಶ ನೀಡಿದರು. ಆದರೆ, ಜನರನ್ನು ಕಾಂಗ್ರೆಸ್ ಸರ್ಕಾರ ಭ್ರಮನಿರಸನ ಮಾಡಿದೆ." ಎಂದು ಹೇಳಿದರು.
"ತುಮಕೂರಿನ ಕಾಂಗ್ರೆಸ್ನ ಓರ್ವ ವ್ಯಕ್ತಿ, ಸಿಎಂಗೆ ಹತ್ತಿರ ಇರುವವರೇ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ನಲ್ಲಿ ಕಮಿಷನ್ ಶೇ 40 ಮೀರಿ ಹೋಗಿದೆ ಎಂದು ಹೇಳಿದ್ದಾರೆ. ಈ ರೀತಿಯಾದರೆ ನಾಡಿನ ಜನತೆಯ ಹಣ ಹೇಗೆ ಅಭಿವೃದ್ಧಿಗೆ ಪೂರಕವಾಗುತ್ತದೆ?" ಎಂದು ಪ್ರಶ್ನಿಸಿದರು.
"ನಾನು ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಲ್ಲ. ಕಾಂಗ್ರೆಸ್ ತಮ್ಮ ಭರವಸೆಯಂತೆ ರಾಜ್ಯದ ಇತರ ಅಭಿವೃದ್ಧಿ ಕಡೆ ಗಮನ ಹರಿಸದೆ, ಸುಮ್ಮನೆ ಕುಳಿತುಕೊಂಡಿದೆ. ಸರ್ಕಾರದಲ್ಲಿ ಹಲವಾರು ಸವಾಲುಗಳಿವೆ. ಇದುವರೆಗೂ ಒಬ್ಬ ಮಂತ್ರಿ ತಾನು ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಭ್ರಷ್ಟಚಾರದಲ್ಲಿಯೇ ತೊಡಗಿಕೊಂಡಿದ್ದಾರೆ. ನಿಗಮದಲ್ಲಿ ಹಲವಾರು ಕೋಟಿ ರೂ. ಭ್ರಷ್ಟಚಾರ ನಡೆದಿದೆ. ಚಂದ್ರಶೇಖರ್ ಡೆತ್ನೋಟ್ ಬರೆಯದೇ ಹೋಗಿದ್ದರೆ ಇವರ ಹಗರಣ ಹೊರಕ್ಕೆ ಬರುತ್ತಿರಲಿಲ್ಲ. ರಾಜ್ಯ ಸರ್ಕಾರದಿಂದ ಬಡವರ ಯೋಜನೆಯಲ್ಲೂ ಲೂಟಿ ಹೊಡೆಯಲಾಗುತ್ತಿದೆ. ನಾನು ಎರಡನೇ ಬಾರಿ ಸಿಎಂ ಆಗಿದ್ದನ್ನು ಸಹಿಸದೇ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಸಿಎಂ ಬೆಳಗಾವಿಯಲ್ಲಿ ತಮ್ಮನ್ನು ರಾಯಣ್ಙನಿಗೆ ಹೋಲಿಕೆ ಮಾಡಿಕೊಂಡು ಸ್ವಪಕ್ಷದವರೇ ತಮ್ಮ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ವಿರೋಧ ಪಕ್ಷದವರ ಪಾತ್ರ ಇಲ್ಲ ಎಂದು ಹೇಳಿದಂತೆ ಆಗಿದೆ. ಚುನಾವಣೆಗೂ ಮುನ್ನ ಜಾಹೀರಾತು ನೀಡಿದಂತೆ ನಡೆದುಕೊಳ್ಳುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.
ಮುಡಾ ಹಗರಣದ ಕುರಿತು ಈಗ ನ್ಯಾಯಾಲಯದಲ್ಲಿ ವಾದ- ವಿವಾದ ಮುಗಿದು ಹೋಗಿದೆ. ಈಗ ಸಿಎಂ ಪರ ವಕೀಲರು ವಾದಕ್ಕೆ ಕಾಲಾವಕಾಶ ಕೇಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಹಿಮಾಚಲ ಪ್ರದೇಶದ ಆಡಳಿತವನ್ನು ಹೊಗಳಿ ಮಾತನಾಡುವ ಕಾಲ ಇತ್ತು. ಆದರೆ ಇಂದು ಮಂತ್ರಿ, ಶಾಸಕರ ಸಂಬಳವನ್ನೂ ಎರಡು ತಿಂಗಳಿನಿಂದ ನೀಡಿಲ್ಲ. ಅಲ್ಲಿ ಆರ್ಥಿಕ ಹೊರೆ ಉಂಟಾಗಿದೆ. ಅಲ್ಲಿನ ಸರ್ಕಾರ ದಯನಿಯ ಸ್ಥಿತಿಯಲ್ಲಿದೆ. ಸಮಾನತೆಗಾಗಿ ಗ್ಯಾರಂಟಿ ಯೋಜನೆ ಜಾರಿ ಎನ್ನುತ್ತಿದ್ದಾರೆ. ಸಿಎಂ ಸೇರಿ ಅನುಭವಸ್ಥರಿದ್ದೀರಿ. ನೀವು ರಾಜ್ಯವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ?" ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.