ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ - Valmiki Corporation

ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

VALMIKI CORPORATION CASE
ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (IANS)

By ETV Bharat Karnataka Team

Published : Jun 1, 2024, 3:22 PM IST

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂ.ಗಳ ಅವ್ಯವಹಾರ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ತನಿಖೆಯಲ್ಲಿ ತಪ್ಪಿತಸ್ಥರು ಎಂದು ಗೊತ್ತಾದರೆ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಆಧಾರ ರಹಿತ ಜಾಹೀರಾತು ನೀಡಿದ್ದ ಆರೋಪದಲ್ಲಿ ದಾಖಲಾಗಿದ್ದ ಖಾಸಗಿ ಪ್ರಕರಣದ ಸಿವಿಲ್​ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ (ಎಸ್​ಐಟಿ) ರಚನೆ ಮಾಡಲಾಗಿದೆ. ಈಗಾಗಲೇ ತನಿಖೆ ಚುರುಕಾಗಿ ನಡೆಯುತ್ತಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಸ್ಪಷ್ಟಪಡಿಸಿದರು.

ನಾವು ಕಾನೂನು ಪಾಲಕರು: ಬಿಜೆಪಿಯವರು ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಬಗ್ಗೆ ಪ್ರತಿಕ್ರಿಯಿಸಿ, ಸಿವಿಲ್ ಸ್ವರೂಪದ ಪ್ರಕರಣ ಇದಾಗಿದೆ. ಕಾನೂನು ರಕ್ಷಕರಾಗಿ, ಪಾಲಕರಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಇಂದು ನಾನು ನ್ಯಾಯಾಧೀಶರ ಮುಂದೆ ಹಾಜರಾಗಿದ್ದೇನೆ. ಜಾಮೀನು ಪಡೆದಿದ್ದೇನೆ ಎಂದರು.

ನನ್ನನ್ನು, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧವೂ ಖಾಸಗಿ ದೂರು ದಾಖಲಾಗಿತ್ತು. ರಾಹುಲ್ ಗಾಂಧಿಯವರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದು ಹೇಳಿದರು. ಈ ರೀತಿಯ ಹಗರಣಗಳು ಬಿಜೆಪಿ ಕಾಲದಲ್ಲೂ ನಡೆದಿವೆ. ಇದು ಬೊಮ್ಮಾಯಿ ಅವರು ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಆದರೂ, ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ವೇಳೆ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ತಿಳಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಕೆ.ಎಸ್​.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿದ್ದವರು, ಈಗ ಏಕೆ ಸುಮ್ಮನಿದ್ದೀರಿ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಪ್ರಕರಣದಲ್ಲಿ ನೇರವಾಗಿ ಈಶ್ವರಪ್ಪ ಅವರ ಹೆಸರು ಬಂದಿತ್ತು. ಇಲ್ಲಿ ಮಂತ್ರಿ ಹೇಳಿದ್ದರು ಎಂದು ಅಧಿಕಾರಿ ಹೇಳಿದ್ದಾರೆ ಎಂದಿದೆ.

ನಮಗೆ ದಾಖಲೆ ಅಥವಾ ಪಾಲ್ಗೊಂಡಿರುವ ಬಗ್ಗೆ ಸುಳಿವು ಸಿಕ್ಕರೆ ನಮ್ಮ ಗೌರವ ಕಾಪಾಡಿಕೊಳ್ಳಲು ತನಿಖೆ ಮುಗಿಯುವ ತನಕ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಇರಬೇಕು. ನಿಗಮದ ಹಣ ಎಲ್ಲೆಲ್ಲಿ ಹೋಗಿದೆ ಎಂದು ಅಧಿಕಾರಿಗಳು ಬೆನ್ನು ಹತ್ತಿದ್ದಾರೆ. ಹಣವನ್ನು ಮರಳಿ ಪಡೆಯುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಜನರ ಬಂಧನವಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಹುಲ್​ ಗಾಂಧಿಗೆ ಜಾಮೀನು ರಹಿತ ವಾರಂಟ್​ಗೆ ಮನವಿ: ಮಧ್ಯಾಹ್ನ 3 ಗಂಟೆಗೆ ಕೋರ್ಟ್​ ತೀರ್ಪು - Rahul Gandhi

ABOUT THE AUTHOR

...view details