ಬೆಂಗಳೂರು:ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಇಡೀ ಮಂತ್ರಿಮಂಡಲ, ಶಾಸಕರು, ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇದ್ದಾರೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.
ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ಗೆ ನಮ್ಮ ಸಿಎಂ, ಕೆಪಿಸಿಸಿ ಅಧ್ಯಕರು ಪ್ರತ್ಯೇಕವಾಗಿ ಭೇಟಿಯಾಗಿ ಎಲ್ಲ ವಿಚಾರಗಳನ್ನೂ ವಿವರಿಸಿದ್ದಾರೆ. ರಾಜಭವನ ದುರ್ಬಳಕೆ ಮಾಡಿಕೊಳ್ಳುವ ಜೆಡಿಎಸ್, ಬಿಜೆಪಿ ಹುನ್ನಾರವು ಹೈಕಮಾಂಡ್‌ಗೆ ಅರ್ಥವಾಗಿದೆ. ಯಾವುದೇ ಹೋರಾಟ ಮಾಡಲು ಹಿಂಜರಿಯಬಾರದು. ಹೀಗಿರುವಾಗ ನಾಯಕತ್ವ ಬದಲಾವಣೆ ಪ್ರಶ್ನೆ ಎಲ್ಲಿಂದ ಬಂತು. ಜೆಡಿಎಸ್- ಬಿಜೆಪಿ ಷಡ್ಯಂತ್ರ ಭಗ್ನಗೊಳಿಸಲು ನಾವು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ತಿಳಿಸಿದರು.
ಸಿಎಂ ಆರೋಗ್ಯಕರವಾಗಿದ್ದಾರೆ, ನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಆಯಾಸ ಆಗುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲೇ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಸಮ್ಮುಖದಲ್ಲಿಯೇ ನಾಯಕತ್ವದ ಬದಲಾವಣೆ ಇಲ್ಲ ಎಂದಾಗ, ಇದಕ್ಕೆಲ್ಲ ಅಂತ್ಯ ಇಲ್ವಾ?. ಸಿದ್ದರಾಮಯ್ಯ ಹಾಗೂ ನನ್ನ ಐಡಿಯಾಲಜಿ ಒಂದೇ. ನಾನು ಸಿದ್ದರಾಮಯ್ಯ ಅವರ ಪರವಾಗಿ ಇವತ್ತು, ನಿನ್ನೆಯಿಂದ ಅಲ್ಲ ಬಹಳ ವರ್ಷಗಳಿಂದಲೂ ಇದ್ದೇನೆ ಎಂದರು.
ರಾಜ್ಯಪಾಲರು 11 ವಿಧೇಯಕ ವಾಪಸ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಹಲವು ಮಹತ್ವದ ಬಿಲ್ಗಳು ವಾಪಸ್ ಬಂದಿವೆ. ಇಷ್ಟು ಬಿಲ್ಗಳು ವಾಪಸ್ ಬಂದರೆ ಹೇಗೆ?. ಯಾವ ರಾಜ್ಯಪಾಲರೂ ಕೂಡ ಇಷ್ಟು ಬಿಲ್ ಕಳುಹಿಸಿರಲಿಲ್ಲ ಎಂದು ತಿಳಿಸಿದರು.