ಶಿವಮೊಗ್ಗ:ತೀರ್ಥಹಳ್ಳಿಯ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿಲ್ಲ. ಕಟ್ಟಡ ಸುರಕ್ಷಿತವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಗಾಜನೂರಿನಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ಕಟ್ಟಡ ಎಲೆಕ್ಟ್ರಿಕಲ್ ವಯರ್ನಿಂದ ನೀರು ಲೀಕೇಜ್ ಆಗಿದೆ ಅಷ್ಟೆ, ಗುತ್ತಿಗೆದಾರರು ಕಟ್ಟಡವನ್ನು ಇನ್ನೂ ಹ್ಯಾಂಡ್ ಓವರ್ ಮಾಡಿಲ್ಲ. ಎಲ್ಲ ಸರಿಪಡಿಸಲಾಗುತ್ತದೆ. ನಾನು ಕಂಟ್ರಾಕ್ಟರ್ ಅಲ್ಲ, ನಾನು ನಿಂತು ಕೆಲಸ ಮಾಡಿಸಲು ಮೇಸ್ತ್ರಿ ಅಲ್ಲ, ಈ ಕುರಿತು ಮುಖ್ಯ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದರು.
ತೀರ್ಥಹಳ್ಳಿಯ ಬೈಪಾಸ್ ರಸ್ತೆಯಲ್ಲಿ ಮಳೆಗೆ ಗುಡ್ಡ ಕುಸಿದು ತಡೆಗೋಡೆ ಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿ, ಗುಡ್ಡ ಕುಸಿಯಬಾರದು ಎಂದು ತಡೆಗೋಡೆ ಕಟ್ಟಲಾಗಿದೆ, ಆದರೆ ಗುಡ್ಡವೇ ಕುಸಿತವಾಗಿದೆ. ಇದನ್ನು ಯಾರು ತಡೆಯಲು ಆಗಲ್ಲ. ಗುಡ್ಡ ಕುಸಿತವಾಗಿ ತಡೆಗೋಡೆ ಬಿದ್ದಿದೆ. ಯಾವುದೇ ಕಳಪೆ ಕಾಮಗಾರಿಯಿಂದ ಗುಡ್ಡ ಕುಸಿತವಾಗಿಲ್ಲ. ಕಾಂಗ್ರೆಸ್ ನವರು ಇದನ್ನೆ ದೊಡ್ಡದು ಮಾಡುತ್ತಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದು ಎಂದು. ಆದರೆ ಗುಡ್ಡ ಕುಸಿದರೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಗರಣ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನವರು ನೀನು ಕಳ್ಳ ಎಂದರೆ ನೀನೇ ಕಳ್ಳ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿಯ ಡೆತ್ನೋಟ್ನಲ್ಲಿ ಸಚಿವರ ಹೆಸರು ಉಲ್ಲೇಖ ಆಗಿದೆ. ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಬಾರಿ ಹೇಳಿಕೆ ಪಡೆದಿದ್ದಾರೆ. ಎಸ್ಐಟಿಯಲ್ಲಿ ಆರೋಪಿಗಳ ಹೆಸರು ಇದೆ. ಆದರೆ ಪ್ರಕರಣ ಮುಚ್ಚುವ ಕೆಲಸ ಆಗಿದೆ ಎಂದು ದೂರಿದರು.