ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರ ಸಭೆ ನಡೆಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಸಭೆ ನಡೆಸಿ, ಸಭೆ ಸೂಚನೆ ನೀಡುವ ಅಧಿಕಾರವಿದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ಸರ್ಕಾರದ ಘನತೆ ಹೆಚ್ಚಿಸುವಲ್ಲಿ ಸಾಹಿತಿಗಳ ಪಾತ್ರ ಕೂಡ ಮಹತ್ವವಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿ ಕೆಲವು ಸಲಹೆ ನೀಡಿದ್ದಾರೆ ಎಂದರು.
ಸಾಹಿತಿಗಳ ಬಗ್ಗೆ ನಾನು ಯಾವುದೇ ವ್ಯಾಖ್ಯಾನ ಮಾಡುವುದಿಲ್ಲ. ಅನಗತ್ಯವಾಗಿ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಈ ಹಿಂದಿನ ಸರ್ಕಾರದಲ್ಲಿ ಯಾರೆಲ್ಲಾ ಎಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ನಡೆಸಿದ್ದರು ಎಂಬುದನ್ನು ಹೇಳುತ್ತಾ ಹೋದರೆ, ಅದು ರಾಜಕೀಯವಾಗುತ್ತದೆ. ಹೀಗಾಗಿ ಈ ವಿಚಾರವನ್ನು ರಾಜಕಾರಣಗೊಳಿಸುವುದಿಲ್ಲ ಎಂದು ಹೇಳಿದರು.
ಹಿಂದಿನ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ವಿವಿಧ ಪ್ರಶಸ್ತಿಯನ್ನೇ ನೀಡಿರಲಿಲ್ಲ. ಘೋಷಣೆ ಮಾಡಿದ್ದವರಿಗೂ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ನಾನು ಸಚಿವನಾದ ಬಳಿಕ ಆ ಸರ್ಕಾರ ಘೋಷಣೆ ಮಾಡಿದವರಿಗೆ ಬದಲಾವಣೆ ಮಾಡದೆ ಪ್ರಶಸ್ತಿ ಪ್ರದಾನ ಮಾಡಿದ್ದೇನೆ. ಇದು ನಮ್ಮ ಸಾಂಸ್ಕೃತಿಕ ಬದ್ಧತೆ ತೋರಿಸುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ- ಸಿಎಂ ಜೊತೆ ಚರ್ಚಿಸಿ ದಿನಾಂಕ ನಿಗದಿ: ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.