ಕರ್ನಾಟಕ

karnataka

By ETV Bharat Karnataka Team

Published : 4 hours ago

Updated : 1 hours ago

ETV Bharat / state

ಮುಖ್ಯಮಂತ್ರಿ ರಾಜೀನಾಮೆ‌ ನೀಡುವ ಅವಶ್ಯಕತೆ ಇಲ್ಲ: ಗೃಹ ಸಚಿವ ಪರಮೇಶ್ವರ್ - Home Minister Parameshwar

ಪ್ರತಿಪಕ್ಷದವರು ಮಾತ್ರ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

Home Minister Parameshwar
ಗೃಹ ಸಚಿವ ಪರಮೇಶ್ವರ್ (ETV Bharat)

ಬೆಂಗಳೂರು: "ಮುಡಾ‌ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನೂ ಇಲ್ಲ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ" ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಯಾವುದೇ ಕಡತಕ್ಕೆ ರುಜು ಹಾಕಿಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ. ಆದರೆ, ಎಲ್ಲೋ ಒಂದುಕಡೆ ನಮಗೆ ನ್ಯಾಯ ಸಿಗಲಿಲ್ಲವೇನೋ ಅನ್ನಿಸುತ್ತಿದೆ. ಮುಂದಿ‌ನ ನ್ಯಾಯಾಂಗ ಹೋರಾಟದ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ" ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್​ (ETV Bharat)

"ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು. ಅಧಿಕಾರ ಬಿಟ್ಟು ಇಳಿಯಬೇಕು ಎನ್ನುವ ಮಾತುಗಳು ಪ್ರತಿಪಕ್ಷದವರಿಂದ ಕೇಳಿಬರುತ್ತಿವೆ. ಇದ್ಯಾವುದು ಕೂಡ ಆಗುವುದಿಲ್ಲ. ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಅನೇಕರು ಸ್ಪಷ್ಟಪಡಿಸಿದ್ದಾರೆ. ನಾನು ಸಹ ಇದೇ ಮಾತನ್ನು ಹೇಳುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಬಂದಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಿದ್ದಾರೆ. ಎಂತಹವರಿಗೂ ಇಂತಹ ಆಪಾದನೆಯಿಂದ ನೋವಾಗುವುದು ಸಹಜ. ಇದಕ್ಕೆ ಹೋರಾಟ ಮಾಡಬೇಕಲ್ಲವೇ? ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ" ಎಂದು ಹೇಳಿದರು‌.

ಹೈಕೋರ್ಟ್‌ ವಿಚಾರಣೆ ವೇಲೆ 'ಮುಖ್ಯಮಂತ್ರಿಯವರ ಪಾತ್ರ ಏನಿದೆ ಎಂಬುದನ್ನು ಹೇಳಿ. ಈ ಬಗ್ಗೆ ಯಾರು ಹೇಳುತ್ತಿಲ್ಲವಲ್ಲ' ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಸಿಎಂ ಪಾತ್ರ ಏನು ಎಂಬುದು ಜಡ್ಜ್‌ಮೆಂಟ್‌ನಲ್ಲಿ ಎಲ್ಲಿಯೂ ಕಾಣಿಸಿಲ್ಲ. ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಮುಖ್ಯಮಂತ್ರಿ ಮತ್ತು ಅವರ ಕಾನೂನು ಸಲಹೆಗಾರರು ತೀರ್ಮಾನ ಮಾಡುತ್ತಾರೆ. ನಮಗೆ ನ್ಯಾಯ ಸಿಕ್ಕಿಲ್ಲ.‌ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಯುತವಾದ ತೀರ್ಮಾನ ಬರುತ್ತದೆ ಎಂಬ ವಿಶ್ವಾಸವಿದೆ" ಎಂದು ಅಭಿಪ್ರಾಯಪಟ್ಟರು.

"ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದುವರಿಯುತ್ತೇವೆ. ಬಿಜೆಪಿಯವರ ಉದ್ದೇಶವೇ ಮುಖ್ಯಮಂತ್ರಿಯವರ ರಾಜೀನಾಮೆ ತೆಗೆದುಕೊಳ್ಳಬೇಕು ಎಂಬುದು. ಅವರು ಹೋರಾಟ ಮಾಡುವುದರಲ್ಲಿ ಆಶ್ಚರ್ಯ ಪಡುವುದು ಏನು ಇಲ್ಲ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡಬೇಡಿ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದ್ದೇವೆ. ಅವರು ರಾಜೀನಾಮೆ ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

"ಮುಖ್ಯಮಂತ್ರಿಯವರ ಮೇಲೆ ಪಕ್ಷದೊಳಗೆ ಯಾವುದೇ ರೀತಿಯ ಒತ್ತಡವಿಲ್ಲ. ಬಿಜೆಪಿಯವರು ಪದೇಪದೆ ರಾಜೀನಾಮೆ ಕೊಡಬೇಕು ಅಂತ ಹೇಳುತ್ತಿರುವುದರಿಂದ ರಾಜೀನಾಮೆ‌ ನೀಡುವುದಿಲ್ಲ‌ ಎಂದು ಮುಖ್ಯಮಂತ್ರಿಯವರು ಪುನರುಚ್ಚರಿಸಿದ್ದಾರೆ‌. ಪಕ್ಷದೊಳಗೆ ಒತ್ತಡವಿರುವ ರೀತಿಯ ವ್ಯತ್ಯಾಸಗಳಾಗಲಿ, ಭಾವನೆಗಳಾಗಲಿ ಇಲ್ಲ. ಹೈಕಮಾಂಡ್ ನಿಮ್ಮ ಜೊತೆಗಿದೆ ಎಂದು ಕೆ.ಸಿ.ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಹೇಳಿದ್ದಾರೆ‌" ಎಂದರು.

"ಹೈಕೋರ್ಟ್‌ನಿಂದ ರಾಜ್ಯಪಾಲರಿಗೆ ಬಲ ಬಂದಿರಬಹುದು. ಅದನ್ನು ಎಲ್ಲರಿಗೂ ಅನ್ವಯಿಸಬೇಕು. ಹೆಚ್‌.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಅವರಿಗೂ ಅನ್ವಯಿಸಬೇಕಲ್ಲವೇ? ಬಲ ಬಂದಿದೆ ಅಂತ ಹೇಳಿ ಒಬ್ಬರಿಗೆ, ಒಂದು ವರ್ಗಕ್ಕೆ ಸೀಮಿತ ಮಾಡುವುದು ಸರಿ ಕಾಣಿಸುವುದಿಲ್ಲ. ಅದು ನ್ಯಾಯ ಅಂತಲೂ ಅನ್ನಿಸುವುದಿಲ್ಲ" ಎಂದು ಹೇಳಿದರು.

"ರಾಜ್ಯಪಾಲರು ಕಡತಗಳನ್ನು ಲೋಕಾಯುಕ್ತಕ್ಕೆ ವಾಪಸ್ ಕಳಿಸಿರಬಹುದು. ಲೋಕಾಯುಕ್ತದವರು ಸ್ಪಷ್ಟನೆ ನೀಡಿ, ಆ ಕಡತಗಳನ್ನು ರಾಜ್ಯಪಾಲರಿಗೆ ವಾಪಸ್ ಕಳುಹಿಸಿದ್ದಾರೆ. ರಾಜ್ಯಪಾಲರು ತಮ್ಮ ಬಲವನ್ನು ಈ ಪ್ರಕರಣಗಳಿಗೂ ಉಪಯೋಗಿಸಬೇಕು" ಎಂದರು.

ಸಿದ್ದರಾಮಯ್ಯ ಅವರು ವೀಕ್ ಆಗಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ," ನಿಮಗೆ ಹಂಗೆ ಅನ್ನಿಸುತ್ತಾ? ನಮಗೆ ಏನು ಆ ರೀತಿ ಅನ್ನಿಸುವುದಿಲ್ಲ. ಸಿದ್ದರಾಮಯ್ಯನವರು ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ. ಯಾಕೆ ವೀಕ್ ಆಗ್ತಾರೆ. ನಮಗೇನು ಹಂಗ್ ಅನ್ನಿಸಿಲ್ಲ. ನಿಮ್ಮ ಕ್ಯಾಮರಾ ಕಣ್ಣಲ್ಲಿ ಏನು ಬರುತ್ತೋ ಗೊತ್ತಾಗಲ್ಲ" ಎಂದರು.

"ಬೆಂಗಳೂರನ್ನೇ ತಲ್ಲಣಗೊಳಿಸಿರುವ ವೈಯಾಲಿಕಾವಲ್‌ನಲ್ಲಿ ನಡೆದ ಮಹಿಳೆ‌ ಮಹಾಲಕ್ಷ್ಮೀ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ಆರೋಪಿ ಒಡಿಶಾದಲ್ಲಿ ಇದ್ದಾನೆ ಎಂದು ಗುರುತಿಸಲಾಗಿದೆ. ಸ್ಥಳ ಬದಲಾಯಿಸುತ್ತಿದ್ದು ತೀವ್ರ ಶೋಧ ನಡೆದಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಆಧಾರದ ಮೇಲೆ ಒಡಿಶಾದಲ್ಲಿ ತಲೆಮರೆಸಿಕೊಂಡಿರುವ ವ್ಯಕ್ತಿಯ ಮೇಲೆ ಸಂಶಯವಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ನಾನು ರಾಜೀನಾಮೆ ಕೊಡ್ತೀನಿ ಅಂತ ಕಾಯ್ಕೊಂಡು ಕುಳಿತಿದ್ದೀರಾ, ಅದು ಅಸಾಧ್ಯ: ಸಿಎಂ ಸಿದ್ದರಾಮಯ್ಯ - MUDA Land Scam

Last Updated : 1 hours ago

ABOUT THE AUTHOR

...view details