ಬೆಂಗಳೂರು : ಅಪಘಾತಕ್ಕೀಡಾದ ವಾಹನದ ದುರಸ್ತಿಗೆ ಆಗಿರುವ ಸಂಪೂರ್ಣ ವೆಚ್ಚವನ್ನು ವಿಮಾ ಕಂಪನಿ ಭರಿಸಿದ ಬಳಿಕವೂ ಹೆಚ್ಚಿನ ಪಾವತಿ ಪಡೆಯಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣ ಸಂಬಂಧ ಮೋಟಾರು ವಾಹನ ಹಕ್ಕುಗಳ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ನಗರದ ಕುಮಾರವೇಲ್ ಜಾನಕಿರಾಮ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ ಈ ಆದೆಶ ನೀಡಿದೆ. ಅಲ್ಲದೆ, ಅಪರಾಧ ವಾಹನದ ವಿಮಾ ಕಂಪನಿಗೆ ಹೆಚ್ಚಿನ ಪರಿಹಾರ ನೀಡುವಂತೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಹಾನಿಗೊಳಗಾದ ವಾಹನಕ್ಕೆ ರಾಯಲ್ ಸುಂದರಂ ಅಲಯನ್ಸ್ ಇನ್ಶುರೆನ್ಸ್ ಕಂಪನಿಯಲ್ಲಿ ವಿಮೆಯನ್ನು ಮಾಡಲಾಗಿದೆ. ಅಪಘಾತಕ್ಕೊಳಗಾದ ಬಳಿಕ ಯಾವುದೇ ತಕರಾರು ಅಥವಾ ಅಡ್ಡಿಯಿಲ್ಲದೆ, ನಷ್ಟವನ್ನು ಕಂಪನಿ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿದೆ. ಬಳಿಕ ಅರ್ಜಿದಾರರು ಅಪಘಾತಕ್ಕೀಡು ಮಾಡಿದ ವಾಹನದ ವಿಮಾ ಕಂಪನಿಯಿಂದ ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದು, ನ್ಯಾಯಮಂಡಳಿ ಆ ಮನವಿಯನ್ನು ತಿರಸ್ಕರಿಸಿದೆ. ಇದು ಸಮರ್ಥನಿಯವಾಗಿದೆ ಎಂದು ಪೀಠ ತಿಳಿಸಿದೆ.
ಹಕ್ಕುದಾರರು ಪರಿಹಾರವಾಗಿ ತನ್ನ ವಾಹನದ ವಿಮಾ ಕಂಪನಿಯಿಂದ ಪೂರ್ಣ ಮೊತ್ತವನ್ನು ಪಡೆದಿದ್ದರೆ, ಬಳಿಕ ಆತ ತನ್ನ ವಾಹನದ ದುರಸ್ತಿಗಾಗಿ ಅಪರಾಧ ವಾಹನದ ವಿಮಾ ಕಂಪನಿಯಿಂದ ಹೆಚ್ಚಿನ ಪಾವತಿಯನ್ನು ಕ್ಲೈಮ್ ಮಾಡಲಾಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಜತೆಗೆ ವಾಹನ ಹಕ್ಕುಗಳ ನ್ಯಾಯಮಂಡಳಿಯ ಆದೇಶ ಪುರಸ್ಕರಿಸಿದೆ.