ನವದೆಹಲಿ/ಬೆಂಗಳೂರು: "ಯಾವುದೇ ಖಾತೆಯ ಅಪೇಕ್ಷೆ ಇಲ್ಲ, ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ದೇಶದ ಪ್ರತಿಯೊಂದು ಭಾಗವನ್ನೂ ತಲುಪುವಂತೆ ಕೆಲಸ ಮಾಡುತ್ತೇನೆ" ಎಂದು ನೂತನ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ನಾನು 15 ವರ್ಷ ಸಚಿವನಾಗಿದ್ದೆ, 5 ಬಾರಿ ಶಾಸಕ, 2 ಬಾರಿ ಪರಿಷತ್ ಸದಸ್ಯ, 2 ಬಾರಿ ಕಾರ್ಪೊರೇಟರ್ ಆಗಿ ಕೆಲಸ ಮಾಡಿದ ಅನುಭವ ಇದೆ. ಈಗ ಹೆಮ್ಮ ಹಾಗೂ ಸಂತೋಷದ ವಿಚಾರ ಎಂದರೆ ದೇಶದ ಅಭಿವೃದ್ಧಿಯ ಹರಿಕಾರ ಮೋದಿ ಅವರ ಸಂಪುಟದಲ್ಲಿ ಅವಕಾಶ ಸಿಕ್ಕಿರುವುದು. ಹಾಗಾಗಿ ನನಗೆ ಇಂತಹದ್ದೇ ಖಾತೆ ಬೇಕು ಅಂತ ಇಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಎಲ್ಲಾ ಖಾತೆಯಲ್ಲಿಯೂ ಉಪಯುಕ್ತ ಕೆಲಸ ಮಾಡುವ ಶಕ್ತಿ ಇದೆ. ಯಾವ ಖಾತೆ ಕೊಟ್ಟರೂ ತಕ್ಷಣದಲ್ಲಿಯೇ ಆ ಖಾತೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ರಾಜ್ಯ, ರಾಷ್ಟ್ರಕ್ಕೆ ಸಹಾಯ ಮಾಡಲು ಗಮನ ಹರಿಸುತ್ತೇನೆ. ದೇಶದ ಮೂಲೆ ಮೂಲೆಯನ್ನೂ ತಲುಪುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮಣ್ಣ ಫುಲ್ ಆಕ್ಟಿವ್ ಆಗಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, "ಚುರುಕಿನಿಂದ ಕೆಲಸ ಮಾಡದಿದ್ದರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ? ದೇಶದಲ್ಲಿ 543 ಸಂಸದರಿದ್ದರೂ ಒಬ್ಬರೇ ಮೋದಿ, ಒಬ್ಬರೇ ಅಮಿತ್ ಶಾ, ಅವರ ಮಾರ್ಗದರ್ಶನದಲ್ಲಿ ಅಲ್ಪಸ್ವಲ್ಪವಾದರೂ ಕೆಲಸ ಮಾಡಬೇಕು. ಅವರ ಮನಸ್ಸು ಗೆಲ್ಲುವುದು ಕಷ್ಟ. ನಮ್ಮ ಮನಸ್ಸಿಗೆ ತೃಪ್ತಿ ನೀಡುವಂತಾದರೂ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದರು.
"ಸಚಿವರಾಗುತ್ತಿದ್ದಂತೆ ರಾಜ್ಯಗಳಿಗೆ ಹಿಂದಿರುಗಬೇಡಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇಲಾಖೆಯ ಕೆಲಸಕ್ಕೆ ಆದ್ಯತೆ ನೀಡಿ, ಸಿಕ್ಕ ಖಾತೆಗಳ ಅಧ್ಯಯನ ಮಾಡಿ ಎಂದು ತಿಳಿಸಿದ್ದಾರೆ. ಎನ್ಡಿಎ ಬಗ್ಗೆ ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಂತೆ ಕೆಲಸ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ನಡೆದುಕೊಳ್ಳಲಿದ್ದೇವೆ. ವಾರಾಂತ್ಯಕ್ಕೆ ರಾಜ್ಯದ ಕಡೆ ಹೋಗುವ ಕುರಿತು ನೋಡುತ್ತೇನೆ" ಎಂದರು.
ಇದನ್ನೂ ಓದಿ:ಅಂದು ಸಿಎಂ ಸ್ಥಾನ, ಇಂದು ಕೇಂದ್ರ ಸಚಿವ ಸ್ಥಾನ: ಬಿಜೆಪಿ ಸಖ್ಯದಿಂದ ಜೆಡಿಎಸ್ಗೆ ಎರಡನೇ ಬಾರಿ ರಾಜಕೀಯ ಲಾಭ - BJP JDS alliance