ಮೈಸೂರು : ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಸಜ್ಜಿತ ಕಟ್ಟಡ ಇದೆ. ಆದರೆ, ಕ್ಯಾಂಟೀನ್ ವ್ಯವಸ್ಥೆ ಇಲ್ಲದೇ ಸೈಕಲ್ ಪಾರ್ಕಿಂಗ್, ಮರದ ಕೆಳಗೆ ಕುಳಿತು ವಿದ್ಯಾರ್ಥಿಗಳು ಊಟ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 1600ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಕಾಲೇಜಿಗೆ ಕ್ಯಾಂಟೀನ್ ವ್ಯವಸ್ಥೆ ಇಲ್ಲ. ಕ್ಯಾಂಟೀನ್ಗಾಗಿ ಕಟ್ಟಡ ನಿರ್ಮಿಸಿದ್ದು, ನಿರ್ವಹಣೆ ಮಾಡಲು ಯಾರೂ ಮುಂದೆ ಬಂದಿಲ್ಲ. ಹೀಗಾಗಿ, ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿರುವ ಕ್ಯಾಂಟೀನ್ ಕಟ್ಟಡ ಪಾಳು ಬಿದ್ದಿದೆ.
ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿ ಧನುಷ್ ಮಾತನಾಡಿದರು (ETV Bharat) ಕ್ಯಾಂಟೀನ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಸೈಕಲ್ ಪಾರ್ಕಿಂಗ್ ಮತ್ತು ಕಾಲೇಜಿನ ಆವರಣದಲ್ಲಿ ಮಳೆ, ಬಿಸಿಲು ಎನ್ನದೇ ಊಟ ಮಾಡುವ ಪರಿಪಾಠ ಎದುರಾಗಿದೆ. ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕಾಲೇಜಿನಲ್ಲಿ ಪಾಳು ಬಿದ್ದಿರುವ ಕ್ಯಾಂಟೀನ್ ತೆರೆದು ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಊಟ ಮಾಡುವ ವ್ಯವಸ್ಥೆ ಇಲ್ಲ: ಈ ಬಗ್ಗೆ ವಿದ್ಯಾರ್ಥಿ ಧನುಷ್ ಎಂಬುವವರು ಮಾತನಾಡಿ, ''ಕಾಲೇಜಿನಲ್ಲಿ ಕ್ಯಾಂಟೀನ್ ಇದೆ, ಕ್ಯಾಂಟೀನ್ ಓಪನ್ ಆಗಿಲ್ಲ, ಊಟ ಮಾಡುವ ವ್ಯವಸ್ಥೆ ಇಲ್ಲ. ಕಾರ್ ಪಾರ್ಕಿಂಗ್ ಅಥವಾ ಬೈಕ್ ಪಾರ್ಕಿಂಗ್ನಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದೇವೆ. ಇಲ್ಲವೆಂದರೆ ಯಾವುದಾದರೂ ಮರದ ಕೆಳಗೆ ಕುಳಿತು ಊಟ ಮಾಡಬೇಕು. ಮಳೆ ಬಂದರೆ ಎಷ್ಟೋ ವೇಳೆ ಊಟನೇ ಮಾಡೋಕೆ ಆಗ್ತಿಲ್ಲ. ಹೀಗಾಗಿ, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ಕ್ಯಾಂಟೀನ್ ಓಪನ್ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ'' ಎಂದಿದ್ದಾರೆ.
ಈ ಬಗ್ಗೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಪ್ರತಿಕ್ರಿಯಿಸಿದ್ದು, ''ಪಿಡಬ್ಲೂಡಿ ಇಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಅದನ್ನು ಕ್ಲೋಸ್ ಮಾಡುವ ವ್ಯವಸ್ಥೆ ಮಾಡುತ್ತಾರೆ. ಈಗಾಗಲೇ ಈ ಬಗ್ಗೆ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇನೆ'' ಎಂದು ಹೇಳಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿ: ಬದಲಾದ ಇಂದಿರಾ ಕ್ಯಾಂಟೀನ್ ಮೆನು; ಉಪಹಾರ, ಊಟಕ್ಕೆ ಹೆಚ್ಚಿದ ಬೇಡಿಕೆ - Indira Canteen