ಗಾಂಧೀಜಿ ಅನುಯಾಯಿ ಗಾಂಧಿ ಬಸಪ್ಪ ಅವರ ಪುತ್ರ ಅಶೋಕ ಕುಮಾರ್ ಮಾಹಿತಿ (ETV Bharat) ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟದಲ್ಲಿ ಅಗ್ರಗಣ್ಯರಾಗಿ ಉಳಿದಿದ್ದು ಮಹಾತ್ಮ ಗಾಂಧೀಜಿ. ತಮ್ಮ ಅಹಿಂಸಾತ್ಮಕ ಹೋರಾಟದ ಮೂಲಕ ಶತಮಾನಗಳ ಕಾಲ ಭಾರತವನ್ನು ಆಳ್ವಿಕೆ ಮಾಡಿದ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ, ಭಾರತವನ್ನು ಆಂಗ್ಲರಿಂದ ದಾಸ್ಯದಿಂದ ಬಿಡುಗಡೆ ಮಾಡಿದ ಹೋರಾಟಗಾರ.
ಇದೇ ಕಾರಣಕ್ಕೆ ಭಾರತದ ಪಿತಾಮಹ ಎಂದು 'ಮೋಹನ ಚಂದ ಕರಮಚಂದ ಗಾಂಧಿ'ಅವರನ್ನು ಕರೆಯುತ್ತಾರೆ. ಇಂದಿಗೂ ಇವರ ಆದರ್ಶ, ಹೋರಾಟದ ಮಾರ್ಗ ಅನುಕರಣೀಯವಾಗಿದೆ. ಇಂತಹ ಮಹಾನ್ ವ್ಯಕ್ತಿತ್ವವುಳ್ಳ ವ್ಯಕ್ತಿಯು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಆಗಮಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದರು. ಗಾಂಧೀಜಿ ಅವರ ಹೋರಾಟದ ಅನುಯಾಯಿಗಳಾಗಿ ಶಿವಮೊಗ್ಗದಲ್ಲಿ ಅನೇಕರು ಇದ್ದರು. ಇವರುಗಳ ಬೇಡಿಕೆಯ ಮೇರೆಗೆ ಕರ್ನಾಟಕ ಪ್ರವಾಸದಲ್ಲಿದ್ದ ಗಾಂಧೀಜಿ ಅವರು 1927 ರಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು.
ಪಾರ್ಕ್ನಲ್ಲಿರುವ ಮಹಾತ್ಮ ಗಾಂಧೀಜಿ ಸ್ಮಾರಕ (ETV Bharat) ಗಾಂಧೀಜಿ ಅವರು ಶಿವಮೊಗ್ಗಕ್ಕೆ ಬಂದು ಹೋದ ನೆನಪಿಗೆ ಸರ್ಕಾರವು ಶಿವಮೊಗ್ಗ ನಗರದಲ್ಲಿ ನಿರ್ಮಾಣ ಮಾಡಿದ ಉದ್ಯಾನವನಕ್ಕೆ "ಮಹಾತ್ಮ ಗಾಂಧೀಜಿ ಉದ್ಯಾನವನ" ಎಂದು ಹೆಸರಿಡಲಾಗಿದೆ.
ಗಾಂಧೀಜಿ ಶಿವಮೊಗ್ಗಕ್ಕೆ ಭೇಟಿ ನೀಡಿದ ಕುರಿತು ಗಾಂಧೀಜಿ ಅನುಯಾಯಿ ಗಾಂಧಿ ಬಸಪ್ಪ ಅವರ ಪುತ್ರ ಅಶೋಕ ಕುಮಾರ್ ಮಾತನಾಡಿ, "ಮಹಾತ್ಮ ಗಾಂಧೀಜಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ವೇಳೆ ಅವರ ಹೋರಾಟ ಹಾಗೂ ಭಾಷಣದಿಂದ ಪ್ರಭಾವಿತರಾದ ಶಿವಮೊಗ್ಗದ ಸ್ವಾತಂತ್ರ್ಯ ಹೋರಾಟಗಾರರಾದ ನಮ್ಮ ತಂದೆ ಗಾಂಧಿ ಬಸಪ್ಪನವರು ಅವರ ಅನುಯಾಯಿಗಳಾಗಿದ್ದರು. ಗಾಂಧೀಜಿ ಮೃತಪಟ್ಟಾಗ ಮಕ್ಕಳಂತೆ ಮೂರು ದಿನ ಒಂದು ಕೋಣೆಯಲ್ಲಿ ಕುಳಿತುಕೊಂಡು ತಂದೆ ಅಳುತ್ತಿದ್ದರಂತೆ".
ಗಾಂಧೀಜಿ ಭೇಟಿ ನೆನಪಿಗೆ ಹೋಟೆಲ್ ಮುಂದೆ ನೆಟ್ಟಿದ್ದರು ಎನ್ನಲಾಗಿರುವ ತೆಂಗಿನ ಮರ (ETV Bharat) "ಪೂಜ್ಯ ಮಹಾತ್ಮ ಗಾಂಧಿ ಅವರು 1927 ರಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಆಗ ನಾವು ಜನಿಸಿರಲಿಲ್ಲ. ನಮ್ಮ ತಂದೆ ಅವರು ಅವಾಗ ಸ್ವಾತಂತ್ರ್ಯ ಹೋರಾಟಗಾರರು. ಆ ಸಂದರ್ಭ ಮಹಾನ್ ಸ್ವಾತಂತ್ರ್ಯ ಹೋರಾಟಗಾರರೆಲ್ಲ ಗಾಂಧೀಜಿ ಅವರನ್ನು ಭೇಟಿ ಮಾಡಿ ಆಂದೋಲನದಲ್ಲಿ ಭಾಗವಹಿಸಿದ್ದರು. ಗಾಂಧೀಜಿ ಅವರ ಅನುಯಾಯಿ ವೆಂಕಟರಮಣ ಶಾಸ್ತ್ರಿ ಮನೆಗೆ ಬಂದು ಗಾಂಧೀಜಿ ಭೇಟಿ ಮಾಡುತ್ತಾರೆ ಎನ್ನಲಾಗುತ್ತದೆ".
"ಹಾಗೇ ಬೃಂದಾವನ ಹೋಟೆಲ್ ಪಕ್ಕ 2 ತೆಂಗಿನ ಮರಗಳನ್ನು ನೆಟ್ಟಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಆ ನಂತರ ಅವರು ಸಾಗರ, ತೀರ್ಥಹಳ್ಳಿ ಮುಖಾಂತರ ತೆರಳಿ ಅಲ್ಲಿ ಭೇಟಿ ಮಾಡುತ್ತಾರೆ. ಕೊನೆಗೆ ರತ್ನಾಕರ ಗೌಡರ ಅಣ್ಣ ದೇವೇಗೌಡರ ಮನೆಗೆ ಕೂಡ ಭೇಟಿ ನೀಡಿ ಹಸ್ತಾಕ್ಷರ ಮಾಡಿದ್ದರು. ಅದನ್ನು ನಾವು ರೆಕಾರ್ಡ್ ಮಾಡಿಕೊಂಡಿದ್ದೇವೆ. ನಮ್ಮ ತಂದೆ ಜೀವಿತಾವಧಿಯಲ್ಲಿ 54 ವರ್ಷ ಗಾಂಧಿ ಜಯಂತಿ ಆಚರಣೆ ಮಾಡಿದ್ದರು. ತಂದೆ ದೈವಾಧೀನರಾದ ನಂತರ 24 ವರ್ಷದಿಂದ ನಾವು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ" ಎಂದು ವಿವರಿಸಿದರು.
ಇದನ್ನೂ ಓದಿ:78ನೇ ಸ್ವಾತಂತ್ಯ್ರ ದಿನಾಚರಣೆ: ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿರುವ ಡಿಕೆಶಿ, ಸಿಪಿವೈ - D K Shivakumar C P Yogeshwar