ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರಿಂದ ಹಿಡಿದು ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಮೈಸೂರಿನ ಖಾಸಗಿ ರೆಸಾರ್ಟ್ನಲ್ಲಿಂದು ಮೈಸೂರು, ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ಮೂರು ಜಿಲ್ಲೆಗಳ ಹಾಲಿ ಶಾಸಕರು, ಮಾಜಿ ಶಾಸಕರು ಮತ್ತು ಜಿಲ್ಲಾ ಮಟ್ಟದ ಪ್ರಮುಖ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ಉದಯಗಿರಿಯಲ್ಲಿ ನಡೆದ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು. ಗೃಹ ಸಚಿವರು ಅಸಹಾಯಕತೆಯಿಂದ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕಲ್ಲು ತೂರಿದ್ದರೂ ಸುಮ್ಮನಿದ್ದರು. ಪೋಸ್ಟ್ ಹಾಕಿದ ವ್ಯಕ್ತಿಯ ಗಡೀಪಾರಿಗೆ ಮುಂದಾಗಿದ್ದರು. ಪೊಲೀಸರು ಸೇರಿದಂತೆ ಜನರಿಗೆ ರಕ್ಷಣೆ ಇಲ್ಲದಾಗಿದೆ. ಮಡಿಕೇರಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೂ, ಕೂಡ ಪೊಲೀಸರಿಂದ ಏನೂ ಮಾಡಲು ಆಗ್ತಿಲ್ಲ. ಯಾಕೆಂದ್ರೆ ಆತ ಕಾಂಗ್ರೆಸ್ ಮುಖಂಡ. ಇದೆಲ್ಲವನ್ನೂ ನೋಡಿದ್ರೆ ಪೊಲೀಸರು ಕೈಕಟ್ಟಿ ಕೂರುವಂತೆ ಮಾಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುತ್ತಿದ್ದೇವೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಗ್ಯಾರಂಟಿಗಳಿಗೆ ಬೇರೆ ಬೇರೆ ಇಲಾಖೆಯ ಹಣ ಬಳಸಿಕೊಳ್ಳಲಾಗುತ್ತಿದೆ. ಆದ್ರೂ ಗ್ಯಾರಂಟಿ ಕೊಡಲು ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಹಾಗಾಗಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಂತ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತದಲ್ಲಿ ಮುಖ್ಯಮಂತ್ರಿಗಳಿಗೆ ಕ್ಲೀನ್‌ಚಿಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲವೂ ಅಧಿಕಾರಿಗಳ ತಪ್ಪು ಅಂತ ಹೇಳಿದ್ದಾರೆ. ಅಧಿಕಾರಿಗಳ ತಪ್ಪಿನ ಹಿಂದೆ ಯಾರಿದ್ರು? ಬೆನ್ನ ಹಿಂದೆಯಿದ್ದ ಬಲಿಷ್ಠರು ಯಾರು? ಲೋಕಾಯುಕ್ತ ಈ ಹಿಂದೆ ಹೇಗಿತ್ತು, ಸಂತೋಷ್ ಹೆಗ್ಡೆ ಕಾಲದಲ್ಲಿ ಹೇಗಿತ್ತು, ಈಗ ಹೇಗಿದೆ. ಇದೇ ಸಿದ್ದರಾಮಯ್ಯ ಈ ಹಿಂದೆ ಲೋಕಾಯುಕ್ತ ಹಲ್ಲು ಕಿತ್ತು ಹಾಕಿದ್ರು. ತಮ್ಮ ಹುಳುಕು ಮುಚ್ಚಿಕೊಳ್ಳಲು ಇದೆಲ್ಲಾ ಮಾಡಿದ್ರು ಎಂದು ಕಿಡಿಕಾರಿದರು.
ಮಿಸ್ಡ್ ಕಾಲ್ ಅಭಿಯಾನ:ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಭಿಪ್ರಾಯ ಸಂಗ್ರಹಿಸಲು ಇವತ್ತು ಸಭೆ ಮಾಡಿದ್ದೇನೆ. ಎಲ್ಲರೂ ಅವರ ಅಭಿಪ್ರಾಯ ಹೇಳಿದ್ದಾರೆ. ಈ ಚುನಾವಣೆಗೆ ಮೆಂಬರ್‌ಶಿಪ್ ಮಾಡಬೇಕಿದೆ. ಅದೂ ಕೂಡ ನಡೆಯುತ್ತಿದೆ. ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನ ಶುರು ಆಗ್ಬೇಕು ಅಂತ ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕೆ ಚಾಲನೆ ಸಿಗಲಿದೆ ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳ ತೀರ್ಮಾನ ಹೈಕಮಾಂಡ್‌ದು:ಸ್ಥಳೀಯ ಸಂಸ್ಥೆ ಚುನಾವಣೆಗೂ ಮೈತ್ರಿ ಮುಂದುವರಿಯುತ್ತಾ ಎಂಬ ಮಾಧ್ಯಮದವರು ಪ್ರಶ್ನೆಗೆ, ನಿನ್ನೆ ಕುಮಾರಣ್ಣ ಅವರು ಬಜೆಟ್ ವಿಚಾರವಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ಸ್ಥಳೀಯ ಚುನಾವಣೆಗಳ ತಯಾರಿ ನಡೆಯುತ್ತಿದೆ. ಇದು ಕಾರ್ಯಕರ್ತರ ಚುನಾವಣೆ. ಪಕ್ಷದ ಅಡಿಯಲ್ಲಿ ಸ್ಪರ್ಧೆ ಮಾಡಲು ಅನೇಕ ಅಭ್ಯರ್ಥಿಗಳು ರೆಡಿ ಇದ್ದಾರೆ. ಯಾರನ್ನು ಆಯ್ಕೆ ಮಾಡ್ಬೇಕು, ಏನು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 19 ಸೀಟು ಸಿಕ್ತು. ಕಾರ್ಯಕರ್ತರು ಒಂದಾಗಿದ್ದೇ ಇದಕ್ಕೆ ಕಾರಣ. ಈ ವಿಚಾರದಲ್ಲೂ ಎರಡೂ ಪಕ್ಷಗಳ ನಾಯಕರು ಕೂತು ಚರ್ಚೆ ಮಾಡಲಿವೆ ಎಂದು ತಿಳಿಸಿದರು.
ಜಿ.ಟಿ.ದೇವೇಗೌಡರು ಹಿರಿಯರು. ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲಿ ಗೆದ್ದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒತ್ತು ಕೊಡುತ್ತಿದ್ದೇನೆ ಅಂತ ಸ್ವತಃ ಜಿಟಿ ದೇವೇಗೌಡರೇ ಸ್ಪಷ್ಟವಾಗಿ ಹೇಳಿದ್ದಾರೆ. 2025ರ ಮೊದಲ ಕರೆ ನನ್ನದು ಹೋಗಿದ್ದು ಜಿಟಿಡಿ ಅವರಿಗೆ. ಬೇಕಾದರೆ ಅವರನ್ನೇ ಕೇಳಿ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಚುನಾವಣೆಗೆ ರಾಜ್ಯದ ಸಂಪತ್ತು ಬಳಕೆ: ನಿಖಿಲ್ ಕುಮಾರಸ್ವಾಮಿ - NIKHIL KUMARASWAMY