ಕರ್ನಾಟಕ

karnataka

ETV Bharat / state

ಯೋಗೇಶ್ವರ್ ಹೇಳಿಕೆಗೆ ಕುಮ್ಮಕ್ಕು ಕೊಟ್ಟವರು ಯಾರಂತ ಜನತೆಗೆ ಗೊತ್ತಾಗುತ್ತಿದೆ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣದಲ್ಲಿ ಅನಸೂಯ ಮಂಜುನಾಥ್ ಅಭ್ಯರ್ಥಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಕಾದು ನೋಡಿ ಎಂದಷ್ಟೇ ಹೇಳಿದರು.

ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Oct 23, 2024, 1:52 PM IST

Updated : Oct 23, 2024, 4:10 PM IST

ಬೆಂಗಳೂರು: ''ಬಿಜೆಪಿಗೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ಕೊಟ್ಟಿರುವುದು ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವಂತಹ ಆರೋಪ ಅಲ್ಲ, ಯಾವಾಗ ತರಾತುರಿಯಾಗಿ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೋ, ಆವತ್ತೇ ಗೊತ್ತಿತ್ತು. ಇದರಲ್ಲಿ ಆಶ್ಚರ್ಯ ಏನು ಇಲ್ಲ'' ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಜೆಪಿ ನಗರದ ತಮ್ಮ ನಿವಾಸದ ಬಳಿ ಇ‌ಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ. ಜೆಡಿಎಸ್ ಕಾರ್ಯಕರ್ತರು ನಿಖಿಲ್​ಗೆ ಟಿಕೆಟ್ ಕೊಟ್ಟರೆ, ನಾವು ಕೆಲಸ ಮಾಡುತ್ತೇವೆ ಅಂದಿದ್ದರು. ಇಲ್ಲಿ ಯಾವುದೇ ತೀರ್ಮಾನಗಳು ಅಂತಿಮ ಆಗಬೇಕಾದರೆ ಎನ್​ಡಿಎ ಕಡೆಯಿಂದ ಘೋಷಣೆ ಆಗಬೇಕು. ನಿನ್ನೆ ಕುಮಾರಣ್ಣ ಅವರು ಇದನ್ನೇ ಹೇಳಿದ್ದಾರೆ, ತಾಳಿದವನು ಬಾಳಿಯಾನು ಅಂತ. ಅಂತಿಮವಾಗಿ ನಮ್ಮ ನಾಯಕರು ಮತ್ತು ಬಿಜೆಪಿ ನಾಯಕರು ಅಭ್ಯರ್ಥಿಯ ಘೋಷಣೆ ಮಾಡುತ್ತಾರೆ'' ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ಗೆ ಕುಮಾರಣ್ಣನೇ ಟಾರ್ಗೆಟ್: ಕಾಂಗ್ರೆಸ್​ಗೆ ಕುಮಾರಸ್ವಾಮಿಯೇ ಟಾರ್ಗೆಟ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ''ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ 12ನ್ನು ಗೆದ್ದಿದ್ದೇವೆ. ಅದರಲ್ಲಿ ಪ್ರಾಮುಖ ಪಾತ್ರ ನಮ್ಮ ಕಾರ್ಯಕರ್ತರು, ಕುಮಾರಣ್ಣನ ನಾಯಕತ್ವ. ಈ ವಿಚಾರಕ್ಕೆ ಕುಮಾರಣ್ಣನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ'' ಎಂದರು.

ಯೋಗೇಶ್ವರ್ ಹೇಳಿಕೆಗೆ ಕುಮ್ಮಕ್ಕು ಕೊಟ್ಟವರು ಯಾರಂತ ರಾಜ್ಯದ ಜನತೆಗೆ ಗೊತ್ತಾಗುತ್ತಿದೆ: ''ಬಿಜೆಪಿಯ ರಾಜ್ಯಮಟ್ಟದ ಒಕ್ಕಲಿಗರನ್ನು ಕುಮಾರಣ್ಣ ಅವರು ತುಳಿತಾರೆ ಎಂಬ ಯೋಗೇಶ್ವರ್​​ ಹೇಳಿಕೆಗೆ ಕುಮ್ಮಕ್ಕು ಕೊಟ್ಟವರು ಯಾರು ಅನ್ನುವುದು ಪ್ರಸ್ತುತ ಬೆಳವಣಿಗೆ ನೋಡಿದರೆ, ರಾಜ್ಯದ ಜನಕ್ಕೆ ಗೊತ್ತಾಗುತ್ತಿದೆ'' ಎಂದು ನಿಖಿಲ್ ಕಿಡಿಕಾರಿದರು.

''ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭೇಟಿ ಮಾಡುವಂತೆ ತಿಳಿಸಿದ್ದಾರೆ. ಹಾಗಾಗಿ, ಅಲ್ಲಿಗೆ ಹೋಗುತ್ತಿದ್ದೇನೆ ಎಂದ ಅವರು, ಅನಸೂಯ ಮಂಜುನಾಥ್ ಅಭ್ಯರ್ಥಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾದು ನೋಡಿ ಎಂದಷ್ಟೇ ಹೇಳಿದರು.

ದೇವೇಗೌಡರ ನಿವಾಸದಲ್ಲಿ ಚರ್ಚೆ: ಪದ್ಮನಾಭನಗರ ನಿವಾಸಕ್ಕೆ ಬರುವಂತೆ ನಿಖಿಲ್​ಗೆ ದೇವೇಗೌಡರು ಸಂದೇಶ ಕೊಟ್ಟಿದ್ದು, ಹಾಗಾಗಿ, ಅವರ ನಿವಾಸಕ್ಕೆ ತೆರಳಿ ಅಲ್ಲಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಗೊಂಡ ಸಿಪಿ ಯೋಗೇಶ್ವರ್; ಸಿಪಿವೈ ಹೇಳಿದ್ದೇನು? ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ!

Last Updated : Oct 23, 2024, 4:10 PM IST

ABOUT THE AUTHOR

...view details