ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ದುಷ್ಕೃತ್ಯಕ್ಕೆ ಶಸ್ತ್ರಾಸ್ತ್ರ ಸಂಗ್ರಹ ಆರೋಪ: ಡಿ.9ರವರೆಗೆ ಶಂಕಿತ ಉಗ್ರ ಎನ್ಐಎ ವಶಕ್ಕೆ - TERROR ACTIVITY

ಬೆಂಗಳೂರಲ್ಲಿ ಭಯೋತ್ಪಾದ ಕೃತ್ಯ ಎಸಗಲು ಶಸ್ತ್ರಾಸ್ತ್ರ ಸಂಗ್ರಹ ಆರೋಪದ ಮೇಲೆ ಶಂಕಿತ ಉಗ್ರನನ್ನು ಎನ್​ಐಎ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.

Bengaluru Terror activity Suspected terrorist ಲಷ್ಕರ್ ಎ ತೋಯ್ಬಾ
ಶಂಕಿತ ಉಗ್ರ ಸಲ್ಮಾನ್ ಖಾನ್ ಎನ್ಐಐ ವಶಕ್ಕೆ (ETV Bharat)

By ETV Bharat Karnataka Team

Published : Dec 5, 2024, 8:25 PM IST

ಬೆಂಗಳೂರು: ಭಯೋತ್ಪಾದಕ ಕೃತ್ಯವೆಸಗಲು ಶಸ್ತ್ರಾಸ್ತ್ರ ಸಂಗ್ರಹಣೆ ಆರೋಪ ಸಂಬಂಧ ನಿಷೇಧಿತ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್​​ಐಎ)ದ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಡಿ.9ರವರೆಗೆ ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಆಫ್ರಿಕಾ ಖಂಡದ ರವಾಂಡೊ ದೇಶದಿಂದ ಎನ್ಐಎ ಹಾಗೂ ಜಾಗತಿಕ ತನಿಖಾ ಸಂಸ್ಥೆಗಳ‌ ನೆರವಿನಿಂದ ನವೆಂಬರ್ 27ರಂದು ಸಲ್ಮಾನ್​ ಖಾನ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಗರದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಎನ್ಐಎ ವಶಕ್ಕೆ ಪಡೆದುಕೊಂಡಿದೆ.

ಯಾರೀ ಸಲ್ಮಾನ್​ ಖಾನ್? ಈತನ ವಿರುದ್ಧದ ಆರೋಪಗಳೇನು?: ನಗರದ ನಾಗೇನಹಳ್ಳಿ ಚರ್ಚ್ ಸಮೀಪ ವಾಸವಾಗಿದ್ದ ಸಲ್ಮಾನ್ ಖಾನ್ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ. ಜೊತೆಗೆ, ಬೆಂಗಳೂರಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಒದಗಿಸುವಲ್ಲಿ ತೊಡಗಿದ್ದ ಎಂಬ ಆರೋಪವಿದೆ. ಪೋಕ್ಸೋ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್ 2018ರಿಂದ 2022ರವರೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ. ಜೈಲಿನಲ್ಲಿ ಸಲ್ಮಾನ್​​ಗೆ ಭಯೋತ್ಪಾದಕ ಪ್ರಕರಣಗಳ ಆರೋಪಿ ಟಿ.ನಾಸೀರ್ ಪರಿಚಯವಾಗಿತ್ತು. ಬಳಿಕ ಸಲ್ಮಾನ್ ಸೇರಿದಂತೆ ಕೆಲ ಸಹ ಕೈದಿಗಳನ್ನ ಬ್ರೈನ್ ವಾಶ್ ಮಾಡಿದ್ದ ನಾಸೀರ್, ಭಯೋತ್ಪಾದನೆಯೆಡೆಗೆ ಸೆಳೆದಿದ್ದ. ಶಿಕ್ಷೆ ಮುಗಿಸಿ ಹೊರಬಂದ ಬಳಿಕ ಸಲ್ಮಾನ್, ಟಿ.ನಾಸೀರ್ ಅಣತಿಯಂತೆ ಸಹಚರರ ಸಹಾಯದಿಂದ ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳನ್ನ ಸಂಘಟಿಸಲು ಶಸ್ತ್ರಾಸ್ತ್ರ, ಸ್ಫೋಟಕಗಳ ಸಂಗ್ರಹಣೆಯಲ್ಲಿ ತೊಡಗಿದ್ದ ಎಂದು ಕಳೆದ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎನ್ಐಎ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು.

ರವಾಂಡಾ ದೇಶದಲ್ಲಿ ಸೆರೆ: ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಸಲ್ಮಾನ್ ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್ಐಎ ಅಧಿಕಾರಿಗಳು ಸಿಬಿಐಗೆ ಮನವಿ ಸಲ್ಲಿಸಿದ್ದರು. ಅದರನ್ವಯ ಜಾಗತಿಕ ತನಿಖಾ ಸಂಸ್ಥೆಗಳ ಮೂಲಕ ಆರೋಪಿಯ ಪತ್ತೆಗೆ ಅನುಕೂಲವಾಗುವಂತೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಕಳೆದ ಆಗಸ್ಟ್​ನಲ್ಲಿ ಸಿಬಿಐ ಅಧಿಕಾರಿಗಳು ಇಂಟರ್ ಪೋಲ್​​ಗೆ ಶಿಫಾರಸು ಮಾಡಿದ್ದರು. ರವಾಂಡಾದಲ್ಲಿದ್ದ ಆರೋಪಿಯನ್ನ ಕಿಗಾಲಿಯಿಯ ಇಂಟರ್ ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋದ ಅಧಿಕಾರಿಗಳ ನೆರವಿನೊಂದಿಗೆ ಬಂಧಿಸಲಾಗಿದೆ. ಎನ್ಐಎ ಅಧಿಕಾರಿಗಳ ಭದ್ರತೆಯೊಂದಿಗೆ ನವೆಂಬರ್ 28ರಂದು ಆರೋಪಿಯನ್ನು ರವಾಂಡದಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿತ್ತು.

ಇದನ್ನೂ ಓದಿ: ಸೈಬರ್​ ಕ್ರೈಂ ಅಪರಾಧಗಳಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರವೇ ಟಾಪ್​: ರಾಜ್ಯದಲ್ಲಿ ಅರೆಸ್ಟ್​ ಆಗಿದ್ದು 3, ಶಿಕ್ಷೆ ಶೂನ್ಯ!

ABOUT THE AUTHOR

...view details