ಬೆಂಗಳೂರು:ಅಕ್ರಮ ವಾಸವಾಗಿದ್ದಲ್ಲದೇ, ತನ್ನ ಸಂಘಟನೆಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಡಕಾಯಿತಿ ಮಾಡುತ್ತಿದ್ದ ಪ್ರಕರಣದಲ್ಲಿ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ) ಸಂಘಟನೆ ಉಗ್ರ ಜೈದುಲ್ಲ ಇಸ್ಲಾಂ ಅಲಿಯಾಸ್ ಕೌಸರ್‌ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 7 ವರ್ಷ ಕಠಿಣ ಶಿಕ್ಷೆ ಹಾಗೂ 57 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದ ಕೌಸರ್, 2014ರಲ್ಲಿ ಸಂಘಟನೆ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಸೇರಿ ಭಾರತ ಪ್ರವೇಶಿಸಿದ್ದರು. ಬಳಿಕ ಅದೇ ವರ್ಷ ಅಕ್ಟೋಬರ್‌ನಲ್ಲಿ ಕೊಲ್ಕೊತ್ತಾದ ಬುರ್ದ್ವಾನ್ ಸ್ಫೋಟ ನಡೆಸಿದ್ದರು. ಬಳಿಕ ತಮ್ಮ ತಂಡಗಳನ್ನು ದಕ್ಷಿಣ ರಾಜ್ಯಗಳ ಕಡೆ ಬೇರ್ಪಡಿಸಿದ್ದ ಕೌಸರ್, ತನ್ನ ಕೆಲ ಸಹಚರರ ಜತೆ ಸೇರಿ ತುಮಕೂರು, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಇತರ ಸಣ್ಣ-ಪುಟ್ಟ ವ್ಯಾಪಾರಸ್ಥನ ಸೋಗಿನಲ್ಲಿ ಓಡಾಡಿಕೊಂಡಿದ್ದರು.
ಅಲ್ಲದೇ, ಇಲ್ಲಿರುವ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟನಾ ಕಾರ್ಯ ಮಾಡುತ್ತಿದ್ದರು. ಇದೇ ವೇಳೆ ಶಂಕಿತ ಕೌಸರ್ ತನ್ನ ತಂಡ ಕಟ್ಟಿಕೊಂಡು 2018ರ ಜನವರಿಯಲ್ಲಿ ಬಿಹಾರದ ಬೋಧ್‌ಗಯ ಸ್ಫೋಟಿಸಿದ್ದರು. ಬಳಿಕ ಮತ್ತೆೆ ಬೆಂಗಳೂರಿಗೆ ಬಂದು ಸಂಘಟನೆಯನ್ನು ಆರ್ಥಿಕವಾಗಿ ಸದೃಢಪಡಿಸಲು ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ದರೋಡೆ, ಡಕಾಯಿತಿ ಮಾಡುತ್ತಿದ್ದರು. ಬಂದ ಹಣವನ್ನು ವಿವಿಧ ಖಾತೆಗಳ ಮೂಲಕ ಸಂಘಟನೆ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ಈ ಸಂಬಂಧ ಸ್ಥಳೀಯ ಠಾಣೆಗಳಲ್ಲಿ 4 ದರೋಡೆ ಪ್ರಕರಣಗಳು ದಾಖಲಾಗಿತ್ತು.