ನವದೆಹಲಿ:ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಶುಕ್ರವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
35 ವರ್ಷದ ಶೋಯೆಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟು ಎಂಬಾತನೇ ಬಂಧಿತ ಆರೋಪಿ. ಈತ ಹುಬ್ಬಳ್ಳಿ ನಗರದ ನಿವಾಸಿಯಾಗಿದ್ದು, ಈ ಹಿಂದೆ ಬೆಂಗಳೂರಿನ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ದೋಷಿಯಾಗಿದ್ದ ಎಂದು ಎನ್ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಭಯೋತ್ಪಾದನೆಯಲ್ಲಿ ಚಟುವಟಿಕೆ ಭಾಗಿ ಶಂಕೆ ಮೇರೆಗೆ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿ ನಾಲ್ಕು ರಾಜ್ಯಗಳಲ್ಲಿ ಇತ್ತೀಚೆಗೆ ಎನ್ಐಎ ಬೃಹತ್ ಕಾರ್ಯಾಚರಣೆ ನಡೆಸಿತ್ತು. ರಾಜ್ಯದ ಬೆಂಗಳೂರು, ಹುಬ್ಬಳಿಯಲ್ಲೂ ದಾಳಿ ಮಾಡಲಾಗಿತ್ತು. ಈ ವೇಳೆ, ಮಿರ್ಜಾ ಮತ್ತು ಆತನ ಸಹೋದರನನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದಾದ ಮೂರು ದಿನಗಳ ನಂತರ ಅಹ್ಮದ್ ಮಿರ್ಜಾನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬೆಂಗಳೂರು ಸೇರಿ ವಿವಿಧ ರಾಜ್ಯಗಳ ಒಟ್ಟು 11 ಸ್ಥಳಗಳಲ್ಲಿ ಎನ್ಐಎ ಶೋಧ
ಈ ಮಿರ್ಜಾನನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಮಾಜಿ ದೋಷಿ ಎಂದು ಗುರುತಿಸಲಾಗಿದೆ. 2018ರಲ್ಲಿ ಜೈಲಿನಿಂದ ಹೊರಬಂದ ನಂತರ ಶೋಯೆಬ್ ಮಿರ್ಜಾ ಈ ಹೊಸ ಸಂಚಿನಲ್ಲಿ ಭಾಗಿಯಾಗಿರುವುದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದೆ.
ವಿದೇಶದಲ್ಲಿರುವ ಶಂಕಿತ ಆನ್‌ಲೈನ್ ಹ್ಯಾಂಡ್ಲರ್‌ನೊಂದಿಗೆ ನಂಟು ಹೊಂದಿದ್ದ ಮಿರ್ಜಾ, ನಂತರ ಮತ್ತೋರ್ವ ಆರೋಪಿಯಾದ ಅಬ್ದುಲ್ ಮಥೀನ್ ತಾಹಾನನ್ನು ಹ್ಯಾಂಡ್ಲರ್ಗೆ ಪರಿಚಯಿಸಿದ್ದ. ಅಲ್ಲದೇ, ಈ ಮಿರ್ಜಾ ಆನ್‌ಲೈನ್ ಹ್ಯಾಂಡ್ಲರ್ ಮತ್ತು ಅಬ್ದುಲ್ ಮಥೀನ್ ತಾಹಾ ನಡುವೆ ಗುಪ್ತಲಿಪಿ ಸಂವಹನಕ್ಕಾಗಿ ಇ-ಮೇಲ್ ಐಡಿ ಒದಗಿಸಿದ್ದ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 1ರಂದು ಬೆಂಗಳೂರಿನ ಐಟಿಪಿಎಲ್ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ ಒಟ್ಟು 9 ಜನ ಗಾಯಗೊಂಡಿದ್ದರು. ಬಳಿಕ ಮಾರ್ಚ್ 3ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ, ತನಿಖೆ ವೇಳೆ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್ ಈ ಪ್ರಕರಣದ ರೂವಾರಿಗಳೆಂದು ಪತ್ತೆ ಹಚ್ಚಿತ್ತು. ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಅಡಗಿದ್ದ ಈ ಇಬ್ಬರೂ ಆರೋಪಿಗಳನ್ನು ಏಪ್ರಿಲ್ 12ರಂದು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.
ಇದನ್ನೂ ಓದಿ:ಟೂರಿಸ್ಟ್ಗಳ ಸೋಗಿನಲ್ಲಿ ಸುತ್ತಾಟ; ಸಿಮ್ ಇಲ್ಲದೇ ಮೊಬೈಲ್ ರಿಪೇರಿಗೆ ಹೋಗಿದ್ದ ಉಗ್ರರು: ಸುಳಿವು ನೀಡಿದ ಆ ಒಂದು ಕಾಲ್!?