ಪ್ರೇಮ ವಿವಾಹಕ್ಕೆ ಯುವತಿ ಪೋಷಕರಿಂದ ಬೆದರಿಕೆ (ETV Bharat) ಧಾರವಾಡ:ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಪ್ರೇಮಿಗಳಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನವದಂಪತಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ಧಾರವಾಡದ ಯುವಕ ಹಾಗೂ ಹಾವೇರಿ ಯುವತಿ ನಡುವೆ ಪ್ರೇಮಾಂಕುರವಾಗಿ, ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ, ಕಳೆದ 6 ವರ್ಷಗಳ ಪ್ರೀತಿಗೆ ಯುವತಿಯ ಮನೆಯವರಿಂದ ವಿರೋಧ ಎದುರಾಗಿದೆ.
ಇತ್ತೀಚೆಗೆ ಪೋಷಕರ ವಿರೋಧದ ನಡುವೆಯೂ ಧಾರವಾಡದ ಯುವಕ ಶಂಭು ಹಾಗೂ ಹಾವೇರಿ ಯುವತಿ ಶಾಲಿನಿ ಪ್ರೇಮ ವಿವಾಹವಾಗಿದ್ದಾರೆ. ಜಾತಿಯಲ್ಲಿ ಬೇರೆ ಬೇರೆ ಆಗಿದ್ದಕ್ಕೆ ಯುವತಿಯ ಪೋಷಕರಿಂದ ಮದುವೆಗೆ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ, ಯುವತಿಗೆ ಬೇರೆ ಯುವಕನ ಜೊತೆಗೆ ಮದುವೆಗೆ ಪೋಷಕರು ಮುಂದಾಗಿದ್ದರು. ಯುವಕ ಶಂಭು ಮನೆಯಲ್ಲಿ ಶಾಲಿನಿಯ ಸಂಬಂಧಕರು ಬಾಡಿಗೆ ಇದ್ದರು. ಇಲ್ಲಿಗೆ ಶಾಲಿನಿ ಆಗಾಗ ಬಂದು ಹೋಗುತ್ತಿದ್ದರು. ಆಗ ಇಬ್ಬರ ನಡುವೆ ಪ್ರೇಮ ಶುರುವಾಗಿತ್ತು.
ವಿರೋಧದ ಹಿನ್ನೆಲೆಯಲ್ಲಿ ನವದಂಪತಿ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆಗೆ ಕೋರಿದ್ದಾರೆ. ಯುವತಿಯ ಪೋಷಕರಿಂದ ನಮಗೆ ಕೊಲೆ ಬೆದರಿಕೆ ಹಾಕಲಾಗಿದೆ, ರಕ್ಷಣೆ ಕೊಡಿ ಎಂದು ದಂಪತಿಯು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
''ನಾವಿಬ್ಬರೂ ಕಳೆದ 6 ವರ್ಷಗಳ ಪ್ರೀತಿಸುತ್ತಿದ್ದೇವೆ. ಆದರೆ, ಯುವತಿಯ ಮನೆಯವರಿಂದ ವಿರೋಧ ಎದುರಾಗಿದೆ. ಈ ಹಿಂದೆ ಯುವತಿಯ ಪೋಷಕರ ಮನೆ ತೆರಳಿ ಮದುವೆಗೆ ಒಪ್ಪುವಂತೆ ಕೋರಿದ್ದೆವು. ಆದರೆ, ಜಾತಿ ಬೇರೆಯಾಗಿರುವ ಕಾರಣಕ್ಕೆ ಅವರ ಪೋಷಕರು ಒಪ್ಪಲಿಲ್ಲ. ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈಗ ಈಕೆಗೆ ಅವರ ಸಂಬಂಧಿಕರ ಹುಡುಗನೊಂದಿಗೆ ಎಂಗೇಜ್ಮೆಂಟ್ ಮಾಡಿದ್ದಾರೆ. ಈ ಬಗ್ಗೆ ಶಾಲಿನಿಗೆ ಇಷ್ಟವಿಲ್ಲದ ಕಾರಣ, ತನ್ನ ಸ್ವಇಚ್ಛೆಯಿಂದ ಹಾವೇರಿಯಲ್ಲಿನ ತನ್ನ ಮನೆಯನ್ನು ಬಿಟ್ಟು ಬಂದಿದ್ದಾಳೆ. ತಾನು ವಾಪಸ್ ಹೋದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಶಾಲಿನಿ ನನಗೆ ತಿಳಿಸಿದಳು. ಬಳಿಕ ತಡ ಮಾಡದೆ ನಾವಿಬ್ಬರೂ ವಿವಾಹವಾಗಿದ್ದೇವೆ. ಇದೀಗ ಯುವತಿಯ ಪೋಷಕರ ಮನೆಯವರಿಂದ ಜೀವ ಬೆದರಿಕೆ ಬರುತ್ತಿದೆ. ತಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ'' ಎಂದು ಯುವಕ ಶಂಭು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಮೈದುಂಬಿ ಹರಿಯುತ್ತಿದೆ ಧರ್ಮಾ ನದಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಂಚಿನೆಗಳೂರು ಒಡ್ಡು - Kanchinegalur oddu falls