ಬೆಂಗಳೂರು: "ಹಿಂದೂಗಳ ರಕ್ತಕ್ಕೆ ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಇಲ್ಲ. ಲವ್ ಜಿಹಾದ್ ಮಾಡುವವರಿಗೆ ಪಾಸ್‌ಪೋರ್ಟ್ ನೀಡಿದ್ದಾರೆ. ಕೊಲೆಗಡುಕರಿಗೆ, ಗಲಭೆ ಮಾಡುವವರಿಗೆ ವೀಸಾ ಕೊಟ್ಟಿದ್ದಾರೆ." ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ನಮ್ಮಿಂದ ಭಯೋತ್ಪಾದಕ ಚಟುವಟಿಕೆ, ಕೊಲೆ ತಡೆಯಲು ಸಾಧ್ಯವಿಲ್ಲ. ನಮ್ಮ ಕೈಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗಲ್ಲ. ಹಾಗಾಗಿ ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಿ ಅಂತ ಹೇಳಿಬಿಡಿ" ಎಂದು ಅವರು ಸರ್ಕಾರಕ್ಕೆ ಚಾಟಿ ಬೀಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕ ಈಗ ಜಿಹಾದಿಗಳ ರಾಜ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿದ್ದು, ಲವ್ ಜಿಹಾದ್ ವಾತಾವರಣ ಸೃಷ್ಟಿಯಾಗಿದೆ. ಸ್ವತಃ ಕಾಂಗ್ರೆಸ್ನವರನ್ನೇ ಈ ಲವ್ ಜಿಹಾದ್ ಬಿಟ್ಟಿಲ್ಲ, ಹುಬ್ಬಳ್ಳಿಯಲ್ಲಿ ಕಾಲೇಜಿನ ಆವರಣದಲ್ಲಿಯೇ ಮತಾಂಧ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂದು ರಾಜ್ಯದಲ್ಲಿ ನಡೆಯುತ್ತಿರುವ ಹಲ್ಲೆಯ ಘಟನೆಗಳನ್ನು ನೋಡಿದರೆ ಈ ಸರ್ಕಾರ ನಾಚಿಕೆಗೇಡಿನ ಸರ್ಕಾರವಾಗಿದೆ. ಗೂಂಡಾಗಳ ಕೈಗೆ ಅಧಿಕಾರ ಕೊಟ್ಟಂತಿದೆ ಹಾಗೂ ಡಾನ್ಗಳು ಸರ್ಕಾರ ನಡೆಸುತ್ತಿರುವಂತಿದೆ" ಎಂದು ಅಶೋಕ್ ಆರೋಪಿಸಿದರು.
"ಹುಬ್ಬಳ್ಳಿ ಘಟನೆಯಲ್ಲಿ ಯುವತಿಯ ತಂದೆಯೇ ಲವ್ ಜಿಹಾದ್ ಆರೋಪ ಮಾಡಿದ್ದಾರೆ. ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಆದರೂ ಕಾಂಗ್ರೆಸ್ನವರು ಇದು ಕೌಟುಂಬಿಕ ವಿಚಾರ ಎಂದಿದ್ದಾರೆ, ಇವರಿಗೆ ನಾಚಿಕೆಯಾಗಬೇಕು. ಕರ್ನಾಟಕದಲ್ಲಿ ಕೇರಳ ಮಾದರಿ ಲವ್ ಜಿಹಾದ್ ನಡೆಯುತ್ತಿದೆ ಎಂದು ನಾವು ಹೇಳಿದಾಗ ಅವರು ತಿರುಗಿ ನಮ್ಮ ವಿರುದ್ಧವೇ ಆರೋಪ ಮಾಡಿದ್ದರು. ಈಗ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯೇ ಲವ್ ಜಿಹಾದ್ಗೆ ಬಲಿಯಾಗಿದ್ದಾರೆ. ಹೀಗಿರುವಾಗ ಇದು ಪ್ರೇಮ ಪ್ರಕರಣ ಎನ್ನುತ್ತೀರಲ್ಲ, ನಾಚಿಕೆಯಾಗಲ್ಲವೇ ನಿಮಗೆ?" ಎಂದು ಅವರು ಪ್ರಶ್ನಿಸಿದರು.
"ಚುನಾವಣೆಯಲ್ಲಿ ಲವ್ ಜಿಹಾದ್ ಒಂದು ಪ್ರಮುಖ ವಿಷಯವಾಗಬಾರದು ಹಾಗೂ ಹಿಂದೂಗಳು ಮಂಗಳಾರತಿ ಮಾಡುತ್ತಾರೆ ಎನ್ನುವ ಆತಂಕದಿಂದ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದಾರೆ. ಅದಕ್ಕಾಗಿಯೇ ಅವರು ಇದನ್ನು ಇದು ಲವ್ ಕೇಸ್ ಎನ್ನುತ್ತಿದ್ದಾರೆ. ಬೆಳಗಾವಿಯಲ್ಲಿ ಮಹಿಳೆಯನ್ನು ಕಟ್ಟಿ ಬೆತ್ತಲೆಗೊಳಿಸಿದ್ದರು, ಅದನ್ನು ಮುಚ್ಚಿಹಾಕಿದಿರಿ. ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್ ಗಲಾಟೆಯಾಯಿತು ಅದನ್ನು ಮುಚ್ಚಿಹಾಕಿದಿರಿ. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ದಾಳಿಕೋರರ ರಕ್ಷಣೆಗೆ ಯತ್ನಿಸಿದಿರಿ. ರಾಮನವಮಿಯಂದು ರಾಮನ ಘೋಷಣೆ ಕೂಗಿದ್ದಕ್ಕೆ ಹಲ್ಲೆಯಾಗಿದೆ. ಹನುಮಾನ್ ಚಾಲೀಸ ಹಾಕಿದ್ದಕ್ಕೆ ಹಲ್ಲೆಯಾಗಿದೆ. ಬೆಂಗಳೂರಿನ ನಟಿಯೊಬ್ಭರ ಮೇಲೆ ಎಂಜಿ ರಸ್ತೆಯಲ್ಲಿ ಹಲ್ಲೆ ನಡೆಸಲಾಗಿದೆ. ಕೋಲಾರದಲ್ಲಿ ರಾಮನ ಚಿತ್ರ ಕೀಳುವ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಅಭಿವೃದ್ಧಿ ಹೀನ ಓಲೈಕೆ ರಾಜಕಾರಣದ ಪರಾಕಾಷ್ಠೆ ಇವರದ್ದು" ಎಂದು ಅವರು ವಾಗ್ದಾಳಿ ನಡೆಸಿದರು.