ಬೆಂಗಳೂರು:ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್ಟಿಎ) ನೀಟ್-ಯುಜಿ ಪರೀಕ್ಷೆಯ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಅಭ್ಯರ್ಥಿಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಬದಲಾವಣೆಯಾಗಿದೆ. ಈ ಹಿಂದಿನ ರಿಸಲ್ಟ್ನಲ್ಲಿ ರಾಜ್ಯದ ಮೂವರು ಟಾಪರ್ಗಳಾಗಿದ್ದರು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ಅವರು 50ನೇ ಶ್ರೇಯಾಂಕಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿದಿದ್ದಾರೆ. ವಿಶೇಷವೆಂದರೆ, ಟಾಪ್ 20 ರಲ್ಲೂ ರಾಜ್ಯದ ಒಬ್ಬ ಅಭ್ಯರ್ಥಿ ಇಲ್ಲ.
21ನೇ ರ್‍ಯಾಂಕ್ ಪಡೆದಿರುವ ಪದ್ಮನಾಭ್ ಮೆನನ್ ರಾಜ್ಯದ ಹೊಸ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮೊದಲು ಅವರು 74ನೇ ಶ್ರೇಯಾಂಕ ಪಡೆದಿದ್ದರು. ಅಂದರೆ, ರಾಜ್ಯದಿಂದ ಯಾವೊಬ್ಬ ಅಭ್ಯರ್ಥಿಯೂ ಪೂರ್ಣಾಂಕ ಪಡೆಯುವಲ್ಲಿ ಸಫಲವಾಗಿಲ್ಲ. ಭಾರ್ಗವ ಭಟ್ (84), ಪಿ.ನಂದನ್ (90) ಹೊಸದಾಗಿ ಟಾಪ್ 100 ಶ್ರೇಯಾಂಕದಲ್ಲಿ ಪ್ರವೇಶಿಸಿದ್ದಾರೆ.
ಈ ಹಿಂದೆ ಟಾಪ್ 100 ರ್ಯಾಂಕರ್ಗಳಾಗಿದ್ದ ಪ್ರಜ್ಞಾನ್ ಪಿ.ಶೆಟ್ಟಿ ಮತ್ತು ಖುಷಿ ಮಾಗನೂರ್ ಅವರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಟಾಪ್ 100ರ ಪಟ್ಟಿಯಲ್ಲಿ ರಾಜ್ಯದ ಯಾವೊಬ್ಬ ಹುಡುಗಿಯರಿಲ್ಲ. ವರ್ಗವಾರು ಶ್ರೇಯಾಂಕದಲ್ಲಿ ಕೆ.ರುಶಿಲ್ (147) ರಾಷ್ಟ್ರೀಯವಾಗಿ ಅಗ್ರ 10 ಎಸ್ಸಿ ಅಭ್ಯರ್ಥಿಗಳಲ್ಲಿ ಸ್ಥಾನ ಪಡೆದಿದ್ದಾರೆ, ಸಮೃದ್ಧ್ (1166) ಟಾಪ್ 10 ಎಸ್ಟಿ ಅಭ್ಯರ್ಥಿಗಳಲ್ಲಿ ಇದ್ದಾರೆ.