ಬೆಂಗಳೂರು:ಭೂಕುಸಿತದಿಂತ ತತ್ತರಿಸಿರುವ ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದುರ್ಘಟನೆಯ ಕುರಿತು ದೂರವಾಣಿ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದುರಂತಕ್ಕೆ ಆಘಾತ ವ್ಯಕ್ತಪಡಿಸಿದರು.
ಪರಿಹಾರ ಕಾರ್ಯದಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ. ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ. ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತೀವ್ರ ಭೂಕುಸಿತ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾದವರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು 1,000 ಹೊದಿಕೆಗಳು ಮತ್ತು ಟಾರ್ಪಲಿನ್‌ಗಳನ್ನು ರವಾನಿಸಲಾಗಿದೆ. ಹೆಚ್ಚುವರಿಯಾಗಿ, ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಮತ್ತು ಅಗತ್ಯವಿರುವವರಿಗೆ ಸಕಾಲಿಕ ವೈದ್ಯಕೀಯ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಎರಡು ಆಂಬ್ಯುಲೆನ್ಸ್‌ಗಳನ್ನು ಕರ್ನಾಟಕ ಕಳುಹಿಸಿಕೊಟ್ಟಿದೆ.
ಸಚಿವ ಸಂತೋಷ್ ಲಾಡ್ ವಯನಾಡ್‌ಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರವಾಹಪೀಡಿತ ವಯನಾಡ್‌ಗೆ ತೆರಳಿದ್ದಾರೆ. ಪ್ರವಾಹಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯವಿರುವ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಸಿಎಂ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.
ಸಿಎಂ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡ್‌ಗೆ ಹೊರಟ ಸಚಿವ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ವಯನಾಡ್ ಭೂಕುಸಿತ: ಮೃತರ ಸಂಖ್ಯೆ 143ಕ್ಕೇರಿಕೆ, ತಾತ್ಕಾಲಿಕ ಸೇತುವೆ ಕಟ್ಟಿ 1 ಸಾವಿರ ಜನರ ರಕ್ಷಿಸಿದ ಸೇನೆ - Wayanad Landslides
ಸಾವಿನ ಸಂಖ್ಯೆ 143ಕ್ಕೇರಿಕೆ: ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ ಈಗಾಗಲೇ 143ಕ್ಕೆ ಏರಿಕೆಯಾಗಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ತಾತ್ಕಾಲಿಕ ಸೇತುವೆಯ ಮೂಲಕ ಸುಮಾರು 1,000 ಜನರನ್ನು ರಕ್ಷಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಸೋಮವಾರ-ಮಂಗಳವಾರ ರಾತ್ರಿ ಸುರಿದ ರಣಮಳೆಗೆ ವಯನಾಡ್ನ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ನಾಲ್ಕೈದು ಗ್ರಾಮಗಳು ಸಂಪೂರ್ಣವಾಗಿ ಭೂಸಮಾಧಿಯಾಗಿದ್ದವು. ಅಪಾರ ಪ್ರಮಾಣದಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 50 ಮೃತದೇಹಗಳನ್ನು ಇರಿಸಲಾಗಿದೆ. ಗಾಯಗೊಂಡಿರುವ ಕನಿಷ್ಠ 116 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಜ್ಯ ಕಂದಾಯ ತಿಳಿಸಿದೆ.
ಇದನ್ನೂ ಓದಿ:ಕನ್ನಡಿಗರ ರಕ್ಷಣೆಗೆ ಪ್ರಯತ್ನ; ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ - Wayanad Land Slide