ರಾಮನಗರ :ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ. ಈಗಲೂ ಚುನಾವಣೆಗೆ ನಿಲ್ಲುವ ಭಾವನೆ ನನ್ನಲ್ಲಿ ಇರಲಿಲ್ಲ. ಆದರೆ, ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರ ಆತಂಕ, ಗೊಂದಲಕ್ಕೆ ಪರಿಹಾರ ಕೊಡಬೇಕಿತ್ತು. ಹಾಗಾಗಿ ಸ್ಪರ್ಧೆ ಅನಿವಾರ್ಯ ಆಯ್ತು ಎಂದು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಂದು ಚನ್ನಪಟ್ಟಣ NDA ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ನಿನ್ನೆ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಇದರಲ್ಲಿ ಚನ್ನಪಟ್ಟಣ ಕ್ಷೇತ್ರ ಬಹಳ ಮಹತ್ವ ಪಡೆದುಕೊಂಡಿತ್ತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚನ್ನಪಟ್ಟಣ ಫಲಿತಾಂಶದ ಬಗ್ಗೆ ಕುತೂಹಲ ಇದೆ. ಈ ಉಪ ಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತೆ. ಈ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆ ಆಗಿರಲಿಲ್ಲ. ಎರಡೂ ಪಕ್ಷದ, ಕಾರ್ಯಕರ್ತರ ಚುನಾವಣೆ ಆಗಿತ್ತು ಎಂದು ಹೇಳಿದರು.
ಎರಡು ಬಾರಿ ಕುತಂತ್ರದಿಂದ ಸೋಲು - ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ರು. ಯುವಕನ ಪರವಾಗಿ ನಡ್ಡಾ ಅವರು ಮಾತನಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿದ್ದಾರೆ. ಕಳೆದ 18 ದಿನಗಳ ಹಿಂದೆ ಎನ್ಡಿಎ ಅಭ್ಯರ್ಥಿ ಯಾರು ಆಗಬೇಕು ಎಂಬ ಪ್ರಶ್ನೆ ಉದ್ಭವ ಆಯ್ತು. ಆಗ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದ್ರು. ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ ಎಂದು ತಿಳಿಸಿದರು.