ಕರ್ನಾಟಕ

karnataka

ETV Bharat / state

ಶರಣಾಗದೇ ಉಳಿದಿದ್ದ ನಕ್ಸಲ್ ರವೀಂದ್ರ ಮುಖ್ಯವಾಹಿನಿಗೆ : ಡಿಸಿ-ಎಸ್​ಪಿ ಮುಂದೆ ಶರಣು - NAXAL ACTIVIST SURRENDER

ಶರಣಾಗದೇ ಉಳಿದಿದ್ದ ನಕ್ಸಲ್ ರವೀಂದ್ರ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಇಂದು ಶರಣಾಗಿದ್ದಾರೆ.

KOTEHONDA RAVINDRA SURRENDER
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾದ ರವೀಂದ್ರ (ETV Bharat)

By ETV Bharat Karnataka Team

Published : Feb 1, 2025, 6:26 PM IST

Updated : Feb 1, 2025, 7:31 PM IST

ಚಿಕ್ಕಮಗಳೂರು:ನಕ್ಸಲ್ ಚಳವಳಿಯಲ್ಲಿ ಸಕ್ರಿಯನಾಗಿದ್ದ ಕೋಟೆಹೊಂಡ ಗ್ರಾಮದ ರವೀಂದ್ರ ಇಂದು ಮುಖ್ಯವಾಹಿನಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮುಂದೆ ರವೀಂದ್ರ ಶರಣಾಗಿದ್ದಾರೆ.

ಜ. 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಆರು ಜನ ನಕ್ಸಲ​ರು ಶರಣಾಗಿದ್ದರು. ಈ ವೇಳೆ ಶರಣಾಗದೇ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದ ರವೀಂದ್ರ ಕಾಡಿನಲ್ಲೇ ಉಳಿದಿದ್ದರು. ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಅಧಿಕಾರಿಗಳ ಮುಂದೆ ರವೀಂದ್ರ ಇಂದು ಶರಣಾಗುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದಾರೆ. ಹೀಗಾಗಿ ಕರುನಾಡಿನಲ್ಲಿ ನಕ್ಸಲಿಸಂ ಯುಗಾಂತ್ಯ ಎಂದೇ ಹೇಳಲಾಗ್ತಿದೆ.

ಶರಣಾಗದೇ ಉಳಿದಿದ್ದ ನಕ್ಸಲ್ ರವೀಂದ್ರ ಮುಖ್ಯವಾಹಿನಿಗೆ : ಡಿಸಿ-ಎಸ್​ಪಿ ಮುಂದೆ ಶರಣು (ETV Bharat)

ರವೀಂದ್ರ 2004-2005ರಲ್ಲಿ ಕಾಡು ಸೇರಿದ್ದರು.‌ ಕಳೆದ ಎರಡು ದಶಕಗಳಿಂದ ಕಾಫಿನಾಡಿನ ಮುಗಿಲೆತ್ತರದ ಬೆಟ್ಟ-ಗುಡ್ಡಗಳ ದಟ್ಟ ಕಾನನದಲ್ಲಿ ನಕ್ಸಲರು ಅಡಗು ತಾಣಗಳನ್ನು ನಿರ್ಮಿಸಿಕೊಂಡಿದ್ದರು.‌ ಸರ್ಕಾರದ ವ್ಯವಸ್ಥೆ, ಜನವಿರೋಧಿ ನೀತಿ ವಿರುದ್ಧ ಭೂಗತರಾಗಿ ಹೋರಾಡುತ್ತಿದ್ದರು. ಆದರೆ, ಕಳೆದೊಂದು ದಶಕದಿಂದ 20ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದರು. ಈ ಪಟ್ಟಿಗೆ ಇದೀಗ ರವೀಂದ್ರ ಕೂಡ ಸೇರಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾದ ರವೀಂದ್ರ (ETV Bharat)

ಕಳೆದ ಜನವರಿ 8ರಂದು ಮುಂಡಗಾರು ಲತಾ, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ವಸಂತ, ಕೇರಳದ ಜೀಷಾ ಹಾಗೂ ಮಂಗಳೂರಿನ ಕುತ್ಲೂರು ಸುಂದರಿ ಅವರು ಸಿಎಂ ಎದುರು ಶರಣಾಗಿದ್ದರು. ಇವರ ಶರಣಾಗತಿ ಬಳಿಕ ಕಾಡಿನಲ್ಲೇ ಉಳಿದಿದ್ದ ಕೋಟೆಹೊಂಡ ರವೀಂದ್ರ, ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು. ಆರು ಜನರ ತಂಡದಿಂದ ಬೇರ್ಪಟ್ಟಿದ್ದ ರವೀಂದ್ರ ಶರಣಾಗತಿ ಸಮಿತಿಯ ಸಂಪರ್ಕಕ್ಕೆ ಸಿಕ್ಕಿರಲೇ ಇಲ್ಲ. ತಿಂಗಳ ಬಳಿಕ ಶಾಂತಿಗಾಗಿ ನಾಗರಿಕ ವೇದಿಕೆಯು ನಕ್ಸಲ್ ರವೀಂದ್ರನನ್ನ ಸಂಪರ್ಕ ಮಾಡಿತ್ತು. ಅದರಂತೆ ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮುಂದೆ ಶರಣಾಗಿದ್ದಾರೆ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾದ ರವೀಂದ್ರ (ETV Bharat)

ಜಿಲ್ಲೆಯ ವಿವಿಧ ಠಾಣೆಗಳಲ್ಲಿ ರವೀಂದ್ರನ ಮೇಲೆ 14 ಪ್ರಕರಣಗಳಿದ್ದು, ಸರ್ಕಾರದ ಶರಣಾಗತಿ ಪ್ಯಾಕೇಜ್ ಅಡಿ ಶರಣಾಗಿರುವ ರವೀಂದ್ರನನ್ನ ಡಿಸಿ-ಎಸ್ಪಿ ಶರಣಾಗತಿ ಪ್ರಕ್ರಿಯೆ ಮೂಲಕ ಸೆರಂಡರ್ ಮಾಡಿಸಿಕೊಂಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಶ್ರೀಧರ್, ನಕ್ಸಲರು ಶರಣಾಗಿಲ್ಲ, ಹೋರಾಟದ ಪಥವನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರಜಾತಾಂತ್ರಿಕವಾಗಿ ಹೋರಾಟ ನಡೆಸುವ ದಾರಿ ಅವರ ಮುಂದಿದೆ. 2014 ರಲ್ಲಿ ಆರಂಭವಾದ ಈ ಪ್ರಕ್ರಿಯೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ಮುಖ್ಯವಾಹಿನಿಗೆ ಬಂದವರನ್ನು ಸರ್ಕಾರ ಜವಾಬ್ದಾರಿಯುತವಾಗಿ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾದ ರವೀಂದ್ರ (ETV Bharat)

ಚಿಂತಕ ಬಂಜಗೆರೆ ರಮೇಶ್ ಮಾತನಾಡಿ, ಬದುಕು ಒಳ್ಳೆಯದು ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಮುಖ್ಯವಾಹಿನಿಗೆ ನಕ್ಸಲರು ಮರಳಿದ್ದಾರೆ. ಇವರ ಬೇಡಿಕೆ ಈಡೇರಿಸುವಲ್ಲಿ ರಾಜ್ಯಮಟ್ಟದ ಸಮಿತಿ ವಿಶೇಷ ಗಮನಹರಿಸಬೇಕು. ಈ ಹಿಂದೆ ಶರಣಾಗತಿ ಆದವರಿಗೆ ಪುನರ್ ವಸತಿ ಪ್ಯಾಕೇಜ್ ಇನ್ನೂ ಸಿಕ್ಕಿಲ್ಲ, ಭೂಮಿ ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಲ್ಲ. ಅವರ ಪರಿಸ್ಥಿತಿ ಕೆಟ್ಟದಾಗಿದ್ದು, ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಇಂದಿನ ನಡಾವಳಿಕೆಯನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುತ್ತದೆ. ಗಿರಿಜನ ಪ್ರದೇಶಗಳಿಗೆ ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸುತ್ತಿದ್ದು ರೂಪುರೇಷೆ ಸಿದ್ಧವಾಗಿದೆ ಎಂದರು.

ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ಮಾತನಾಡಿ, ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಶ್ರಮವಹಿಸಿದ ಎಲ್ಲರ ಪ್ರಯತ್ನವನ್ನು ಶ್ಲಾಘಿಸಿ ಅಭಿನಂದಿಸಿದರು.

ಶರಣಾಗತಿ ಆದ ನಕ್ಸಲ್ ಹೋರಾಟಗಾರ ರವೀಂದ್ರ ಮಾತನಾಡಿ, ಮಲೆನಾಡ ಭಾಗದಲ್ಲಿನ ರಸ್ತೆಗಳ ಅಭಿವೃದ್ಧಿ, ಭೂ ಮತ್ತು ವಸತಿ ಸೌಲಭ್ಯ ಕಲ್ಪಿಸುವುದು, ಕಾಡು ಉತ್ಪನ್ನ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಇದನ್ನೂ ಓದಿ:ಮತ್ತೋರ್ವ ನಕ್ಸಲ್ ಶರಣಾಗತಿ: ಕೋಟೆಹೊಂಡ ರವಿ ಇಂದೇ ಮುಖ್ಯವಾಹಿನಿಗೆ - NAXAL SURRENDER

Last Updated : Feb 1, 2025, 7:31 PM IST

ABOUT THE AUTHOR

...view details