ಬೆಂಗಳೂರು:ಕರ್ನಾಟಕದ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾಗಿರುವ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆರ್.ಎಸ್. ರಾಜಾರಾಮ್ ಶನಿವಾರ ಬೆಳಗ್ಗೆ ಬೆಂಗಳೂರಿನ ಅಬ್ಬಿಗೆರೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
1960ರಿಂದ ನವಕರ್ನಾಟಕ ಪ್ರಕಾಶನದಲ್ಲಿ ಕೆಲಸಕ್ಕೆ ಸೇರಿ, ತಮ್ಮ ಕ್ರಿಯಾಶೀಲತೆ, ಬದ್ಧತೆಯಿಂದಾಗಿ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನವಕರ್ನಾಟಕ ಪ್ರಕಾಶನವನ್ನು ರಾಜ್ಯದಲ್ಲಿ, ಕನ್ನಡ ಓದುಗರ ಮಧ್ಯೆ ವ್ಯಾಪಕವಾಗಿ ಬೆಳೆಸಿದ ಕೀರ್ತಿ ರಾಜಾರಾಮ್ ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ, ವೈಚಾರಿಕ ಲೋಕಕ್ಕೆ ವಿಭಿನ್ನವಾದ ಕೃತಿಗಳನ್ನು ರಾಜಾರಾಮ್ ಪರಿಚಯಿಸಿದ್ದಾರೆ. ವಿಶ್ವಕಥಾಕೋಶ, ಕರ್ನಾಟಕ ಏಕೀಕರಣ ಇತಿಹಾಸ, ಸ್ವತಂತ್ರ್ಯ ಗಂಗೆಯ ಸಾವಿರ ತೊರೆಗಳು, ಲೋಕಾಯತ, ಜ್ಞಾನ-ವಿಜ್ಞಾನ-ಕೋಶ, ಕರ್ನಾಟಕ ಕಲಾದರ್ಶನ, ಲೋಕ-ಜ್ಞಾನ-ಮಾಲೆ, ಇಗೋ ಕನ್ನಡ, ವಿಶ್ವಮಾನ್ಯರು, ಲೋಕತತ್ವಶಾಸ್ತ್ರ ಪ್ರವೇಶಿಕೆ ಇಂತಹ ಹಲವಾರು ಯೋಜನೆಗಳನ್ನು ರಾಜ್ಯದ, ದೇಶದ ಪ್ರತಿಭಾನ್ವಿತ ಚಿಂತಕರ, ಲೇಖಕರ ಮೂಲಕ ಬರೆಯಿಸಿ, ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಥಪೂರ್ಣವಾದ ಕೃತಿಗಳನ್ನು ಕೊಡುವಲ್ಲಿ ರಾಜಾರಾಮ್ ಅವರ ಪಾತ್ರ ದೊಡ್ಡದಾಗಿದೆ.
ಪುಸ್ತಕಗಳ ಮೂಲಕ ಮಾನವಕುಲದ ಸೇವೆ ಎಂಬ ಘೋಷಣೆಯೊಂದಿಗೆ ಕರ್ನಾಟಕದಲ್ಲಿ ವೈಚಾರಿಕ, ಜನಪರ, ಪ್ರಗತಿಪರ ಎಡಪಂಥೀಯ ಸಾಹಿತ್ಯವನ್ನು ನವಕರ್ನಾಟಕ ಪ್ರಕಾಶನ ಹೊರತರುವಲ್ಲಿ ರಾಜಾರಾಮ್ ಅವರ ಪಾತ್ರ ಸ್ಮರಣೀಯವಾದದ್ದು. ಕರ್ನಾಟಕದಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಪುಸ್ತಕ ಪ್ರದರ್ಶನ ತಂಡಗಳನ್ನು ಕಟ್ಟಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಿ ರಾಜ್ಯದ ಮೂಲೆ ಮೂಲೆಗೆ ಪ್ರಮುಖ ಲೇಖಕರ ವಿಭಿನ್ನ ವಸ್ತು ವಷಯದ ಕೃತಿಗಳು ತಲುಪುವಂತೆ ಮಾಡುವಲ್ಲಿ ಅವರ ಕ್ರಿಯಾಶೀಲತೆ ಕೆಲಸ ಮಾಡಿದೆ.