ಬೆಂಗಳೂರು: ಸೇವಾ ಹಿರಿತನ, ಬಡ್ತಿ ಮತ್ತಿತರ ಸೇವಾ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕ ಸದಸ್ಯಪೀಠ ರಾಷ್ಟ್ರೀಯ ಆಯೋಗದ ಆದೇಶವನ್ನು ರದ್ದು ಮಾಡಿ ಆದೇಶಿಸಿದೆ. ಸೇವಾ ನಿಯಮಗಳಿಗೆ ಸಂಬಂಧಿಸಿದ ಅದರಲ್ಲೂ ವಿಶೇಷವಾಗಿ ಬಡ್ತಿ, ಸೇವಾ ಹಿರಿತನ ವಿಚಾರದಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ದೂರುಗಳನ್ನು ಪುರಸ್ಕರಿಸುವ ಅಧಿಕಾರವಿಲ್ಲ. ಅಂತಹ ವಿಚಾರಗಳು ಆಡಳಿತಾತ್ಮಕ ಕಾನೂನು ವ್ಯಾಪ್ತಿಗೆ ಒಳಪಡಲಿದ್ದು, ಆಡಳಿತಾತ್ಮಕ ನ್ಯಾಯಮಂಡಳಿಗಳು ಅಂತಹ ವಿಚಾರದಲ್ಲಿ ವ್ಯಾಜ್ಯಗಳ ವಿಚಾರಣೆ ನಡೆಸಿ ಸೂಕ್ತ ಆದೇಶಗಳನ್ನು ನೀಡುವ ಅಧಿಕಾರ ಹೊಂದಿವೆ ಎಂದು ಪೀಠ ತಿಳಿಸಿದೆ.
ಅಲ್ಲದೇ, ಈ ಪ್ರಕರಣದಲ್ಲಿ ರಾಷ್ಟ್ರೀಯ ಆಯೋಗ ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ಸಂವಿಧಾನದ ಕಲಂ 338 ರಡಿ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ರಕ್ಷಣೆ, ಕಲ್ಯಾಣ ಮತ್ತು ಸಾಮಾಜಿಕ ಆರ್ಥಿಕ ಬೆಳವಣಿಗೆ ಕುರಿತ ವಿಚಾರಗಳ ಬಗ್ಗೆ ತನಿಖೆ, ಮೇಲ್ವಿಚಾರಣೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಬಹುದಾಗಿದೆ. ಆದರೆ, ಸೇವಾ ವಿಚಾರದಲ್ಲಿ ಆ ಅಧಿಕಾರವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.