ಬೆಳಗಾವಿ: "ಕರ್ನಾಟಕ ರಾಜ್ಯದಲ್ಲಿ 25 ಸಾವಿರ ಪಾರಂಪರಿಕ ತಾಣಗಳ ಪೈಕಿ 810 ತಾಣಗಳನ್ನು ಮಾತ್ರ ಸಂರಕ್ಷಿಸಲು ಸಾಧ್ಯವಾಗಿದೆ. ಉಳ್ಳವರ ಸಹಕಾರ ಮತ್ತು ಸಾಮುದಾಯಿಕ ಸಹಕಾರದಿಂದ ಪಾರಂಪರಿಕ ತಾಣಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಆದ್ದರಿಂದ ಕರ್ನಾಟಕ ಸರ್ಕಾರವು "ನಮ್ಮ ಸ್ಮಾರಕ ದತ್ತು ಯೋಜನೆಯನ್ನು ಪ್ರಾರಂಭಿಸಿದೆ ಮತ್ತು ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ" ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಹಣಮಂತ ನಿರಾಣಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, "ಪ್ರವಾಸೋದ್ಯಮವನ್ನು ಉತ್ತೇಜಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಿಜಯಪುರ ಪೂರ್ಣ ಜಿಲ್ಲೆಯನ್ನು ಹಾಗೂ ಬಾಗಲಕೋಟೆ ಜಿಲ್ಲೆಯ ಐಹೊಳೆ, ಬಾದಾಮಿ, ಪಟ್ಟದಕಲ್ಲು, ಕೂಡಲಸಂಗಮ, ಬೀಳಗಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳಾಗಿ ಗುರುತಿಸಿ, ಈ ತಾಣಗಳ ತಾಲೂಕುಗಳಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಖಾಸಗಿ ಹೂಡಿಕೆದಾರರಿಗೆ ಸಹಾಯಧನ, ರಿಯಾಯಿತಿ ಮತ್ತು ಉತ್ತೇಜನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ಹಿನ್ನೀರಿನಲ್ಲಿರುವ ಪಕ್ಷಿಧಾಮ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು:ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಾದ ಬದಾಮಿ, ಬನಶಂಕರಿ, ಐಹೂಳೆ, ಪಟ್ಟದಕಲ್ಲು, ಗೋಲಗುಂಬಜ್, ಶಿವನ ಮಂದಿರ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿರುವ ಪಕ್ಷಿಧಾಮ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಗುಹಾಂತರ ದೇವಾಲಯ, ಐಹೊಳೆ ದುರ್ಗಾ ದೇವಾಲಯ ಸಂಕಿರ್ಣ ಮತ್ತು ವಿಶ್ವ ಪರಂಪರೆ ಸ್ಮಾರಕ ಪಟ್ಟದಕಲ್ಲು ದೇವಾಲಯಗಳ ಸಮೂಹ ಹಾಗೂ ವಿಜಯಪುರ ಜಿಲ್ಲೆಯ ಗೋಲಗುಂಬಜ್, ಈ ಸ್ಥಳಗಳ ಸ್ಮಾರಕಗಳ ನಿರ್ವಹಣೆ ಹಾಗೂ ಉಸ್ತುವಾರಿಯನ್ನು ಭಾರತೀಯ ಪುರಾತತ್ವ ಸಂರಕ್ಷಣಾ (ASI) ರವರ ವ್ಯಾಪ್ತಿಗೆ ಒಳಪಡುತ್ತದೆ.