ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರದ ಕುರಿತು ಮಹತ್ವದ ಮಾಹಿತಿ ಹೊರಬಿದಿದ್ದು, 37 ಮಾದರಿಯ ಪರೀಕ್ಷೆೆಗಳನ್ನು ನಡೆಸಲಾಗಲಿದೆ.
ನಾಳೆಯಿಂದ ನಮ್ಮ ಮೆಟ್ರೋ ಮೊದಲ ಚಾಲಕ ರಹಿತ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದ್ದು, ಆ ಬಳಿಕ ಚಾಲಕ ರಹಿತ ಟ್ರೈನ್ ಶೀಘ್ರವೇ ಹಳಿಗಿಳಿಯಲಿದೆ. ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 18.82 ಕಿ.ಮೀ ಈ ರೈಲು ಸಂಚಾರ ನಡೆಸಲಿದೆ.
ನಾಲ್ಕು ತಿಂಗಳುಗಳ ಕಾಲ 37 ಮಾದರಿಯ ಪರೀಕ್ಷೆಗಳು ನಡೆಯಲಿದ್ದು, ಆ ಬಳಿಕ 45 ಸಂಪರ್ಕ ಸಿಗ್ನಲಿಂಗ್ ವ್ಯವಸ್ಥೆ, ದೂರ ಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ಸೇರಿದಂತೆ ಅನೇಕ ಸಿಸ್ಟಮ್ ಆಧಾರಿತ ಪರೀಕ್ಷೆಗಳು ನಡೆಯಲಿವೆ.
ಚಾಲಕ ರಹಿತ ಹಳದಿ ಮಾರ್ಗದ ಮೆಟ್ರೋ ಪರೀಕ್ಷೆ ಹೊಸ ರೋಲಿಂಗ್ ಸ್ಟಾಕ್ ಆಗಿರುವುದರಿಂದ ಬಹು ಪರೀಕ್ಷೆಗಳನ್ನು ನಡೆಸಲಾಗಿದ್ದು, ಸ್ಟಾಟಿಕ್ ಮತ್ತು ಪ್ರಾಥಮಿಕ ಪರೀಕ್ಷೆಗಾಗಿ ತೆರಳುವ ಮೊದಲು ಬೋಗಿಗಳನ್ನು ಜೋಡಿಸಲಾಗಿದೆ. ನಂತರ ಅದರ ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲುಗಳ ಕಾರ್ಯಾಚರಣೆಗೂ ಮೊದಲು ಶಾಸನಬದ್ಧ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್ ಮತ್ತು ಸ್ಟ್ಯಾಂಡರ್ಡ್ ಆರ್ಗನೈಸೇಶನ್ ಮೂಲಕ ಆಸಿಲೇಷನ್ ಟ್ರಯಲ್ಸ್ ಮತ್ತು ಕಮಿಷನರ್ ಆಫ್ ಮೆಟ್ರೊ ರೈಲು ಸೇಫ್ಟಿ ಅವರಿಂದ ತಪಾಸಣೆಗೆ ಒಳಪಡಿಸಲಾಗಲಿದೆ ಎಂದಿದ್ದಾರೆ.
ಆರ್‌ಡಿಎಸ್‌ಓ ಮತ್ತು ಸಿಎಂಆರ್‌ಎಸ್‌ನ ಶಿಫಾರಸುಗಳನ್ನು ಆಧರಿಸಿ, ವಾಣಿಜ್ಯ ಸೇವೆಗಾಗಿ ರೈಲುಗಳನ್ನು ಪರಿಚಯಿಸುವ ಮೊದಲು ಅನುಮತಿ ಮಂಡಳಿಯ ಅನುಮೋದನೆಯನ್ನು ಪಡೆಯಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಇನ್ಮುಂದೆ ಬೆಳಗ್ಗೆ 5 ಗಂಟೆಯಿಂದ ನಮ್ಮ ಮೆಟ್ರೋ ಸೇವೆ, ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ