ಬೆಂಗಳೂರು:ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ-ನಾಗಸಂದ್ರ ನಿಲ್ದಾಣಗಳ ನಡುವೆ ಜನವರಿ 26ರಿಂದ ಮೂರು ದಿನಗಳ ಕಾಲ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ತಿಳಿಸಿದೆ.
ಮೂರು ದಿನಗಳ ಕಾಲ ಪೀಣ್ಯದಿಂದ ರೇಷ್ಮೆಸಂಸ್ಥೆ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಲಭ್ಯವಿರಲಿದೆ. ಜನವರಿ 29ರಿಂದ ಎಂದಿನಂತೆ ಬೆಳಿಗ್ಗೆ 5 ಗಂಟೆಯಿಂದ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ರೈಲು ಸಂಚರಿಸಲಿದೆ. ತಾತ್ಕಾಲಿಕವಾಗಿ ರೈಲು ಸೇವೆ ಸ್ಥಗಿತದಿಂದ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಟಿಕೆಟ್ ಖರೀದಿ ಸಮಯ ಉಳಿಸಲು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಟಿಕೆಟ್, ಕ್ಯೂಆರ್ ಕೋಡ್ ಟಿಕೆಟ್ ಸೇರಿದಂತೆ ಡಿಜಿಟಲ್ ಟಿಕೆಟ್ ಸೌಲಭ್ಯ ಬಳಸಬಹುದು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಇಂದು ಇಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ: ಕನಕಪುರ ಮುಖ್ಯರಸ್ತೆಯಲ್ಲಿರುವ ಬನಶಂಕರಿ ದೇವಾಲಯದ ಜಾತ್ರಾಮಹೋತ್ಸವ ನಡೆಯುತ್ತಿದ್ದು, ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ. ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬನಶಂಕರಿ ಬಸ್ ನಿಲ್ದಾಣದಿಂದ ಸಾರಕ್ಕಿ ಮಾರ್ಕೆಟ್ ಸರ್ಕಲ್ ವರೆಗೆ ಬ್ರಹ್ಮರಥೋತ್ಸವದ ರಥಾರೋಹಣಾ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವ ಸಾಧ್ಯತೆಯಿದೆ. ಹೀಗಾಗಿ ಬನಶಂಕರಿ ಬಸ್ ನಿಲ್ದಾಣದಿಂದ ಸಾರಕ್ಕಿ ಮಾರ್ಕೆಟ್‌ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಸಾರ್ವಜನಿಕರು ಈ ಸಂಚಾರ ಬದಲಾವಣೆಗೆ ಸಹಕರಿಸುವಂತೆ ನಗರ ಸಂಚಾರ ಪೊಲೀಸರು ಕೋರಿದ್ದಾರೆ.
- ಕನಕಪುರ ಮುಖ್ಯರಸ್ತೆ ಕೋಣನಕುಂಟೆ ಕಡೆಯಿಂದ ಬಂದು ಜೆ.ಪಿ.ನಗರ ಮೇಟ್ರೋ ಮಾರ್ಗವಾಗಿ ಬನಶಂಕರಿ ಬಸ್ ನಿಲ್ದಾಣಕ್ಕೆ ಸಂಚರಿಸುವವರು ಜೆ.ಪಿ.ನಗರ ಮೇಟ್ರೋ ಜಂಕ್ಷನ್ (ಸಾರಕ್ಕಿ ಸಿಗ್ನಲ್) ಹತ್ತಿರ ಬಲ ತಿರುವು ಪಡೆದು ಸಿಂಧೂರ ಜಂಕ್ಷನ್-ಆರ್.ವಿ.ಆಸ್ಟರ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು ರಾಜಲಕ್ಷ್ಮಿ ಸಿಗ್ನಲ್ ತಲುಪಿ ಮುಂದೆ ಸಾಗಬೇಕು. ಅಂತೆಯೇ, ಸಾರಕ್ಕಿ ಮಾರ್ಕೆಟ್ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಇಂದಿರಗಾಂಧಿ ಸಿಗ್ನಲ್ ಹತ್ತಿರ ಎಡ ತಿರುವು ಪಡೆದು ರಾಜಲಕ್ಷ್ಮಿ ಸಿಗ್ನಲ್ ತಲುಪಿ ಮುಂದೆ ಚಲಿಸಬಹುದು.
- ಬನಶಂಕರಿ ಬಸ್ ನಿಲ್ದಾಣ ಕಡೆಯಿಂದ ಸಾರಕ್ಕಿ ಸಿಗ್ನಲ್ ಕೋಣನಕುಂಟೆ ಕ್ರಾಸ್ ಕಡೆ ಸಂಚರಿಸುವವರು ಬನಶಂಕರಿ ಬಸ್ ನಿಲ್ದಾಣದ ಹತ್ತಿರ ಬಲ ತಿರುವು ಪಡೆದು ಯಾರಬ್ ನಗರ-ಕುಮಾರಸ್ವಾಮಿ ಲೇಔಟ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಇಲಿಯಸ್ ನಗರ-ಸಾರಕ್ಕಿ ಸಿಗ್ನಲ್ ತಲುಪಿ ಮುಂದೆ ಸಾಗಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ನಮ್ಮ ಮೆಟ್ರೋ, ಬಿಎಂಟಿಸಿ ನಡುವೆ ಒಪ್ಪಂದ: ಫೀಡರ್ ಬಸ್‌ಗಳ ಸಂಖ್ಯೆ ಹೆಚ್ಚಿಸಲು ನಿರ್ಧಾರ