ಬೆಂಗಳೂರು: ನಮ್ಮ ಮೆಟ್ರೋ ಆರ್‌ವಿ ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಮ್ಮ ಮೆಟ್ರೋ ಟೆಂಡರ್ ಕರೆದಿದೆ.
19 ಕಿ.ಮೀ. ಉದ್ದದ ಮಾರ್ಗವು 16 ನಿಲ್ದಾಣಗಳನ್ನು ಒಳಗೊಂಡಿದ್ದು, ಈ ಪೈಕಿ, 13 ನಿಲ್ದಾಣಗಳಲ್ಲಿ ಮಾತ್ರ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಎಲ್ಲ ನಿಲ್ದಾಣಗಳಲ್ಲಿ ಕೇವಲ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ಗೆ ಅವಕಾಶ ನೀಡಲಾಗುತ್ತಿದೆ. ಈ ಮಾರ್ಗದಲ್ಲಿ ಐಟಿ ಕಂಪನಿಗಳು ಹೆಚ್ಚಿರುವುದರಿಂದ ಬಹುತೇಕರು ಕಾರು ಬಳಕೆ ಮಾಡುತ್ತಿದ್ದು, ಕಾರು ಪಾರ್ಕಿಂಗ್ ಸೌಲಭ್ಯ ಕೊರತೆ ಉದ್ಯೋಗಿಗಳಲ್ಲಿ ಸಮಸ್ಯೆಯನ್ನುಂಟು ಮಾಡಲಿದೆ.
13 ನಿಲ್ದಾಣಗಳಲ್ಲಿ ಒಟ್ಟು 2,690 ದ್ವಿಚಕ್ರ ವಾಹನಗಳಿಗೆ ಮಾತ್ರ ಪಾರ್ಕಿಂಗ್ ಅವಕಾಶವಿದ್ದು, ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ -1ರಲ್ಲಿ ಒಂದು ಸಾವಿರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮಾರ್ಗದ ಇಂಟರ್‌ಚೇಂಜ್ ನಿಲ್ದಾಣ ಆರ್‌ವಿ ರಸ್ತೆ ನಿಲ್ದಾಣದಲ್ಲಿ ಕೇವಲ 223 ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ನಿಲ್ದಾಣದಲ್ಲಿ ಹೆಚ್ಚು ಜನ ಪ್ರಯಾಣ ಮಾಡುವುದರಿಂದ ಪಾರ್ಕಿಂಗ್‌ನ ಅಲಭ್ಯತೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆಯಾಗುವ ಸಾಧ್ಯತೆಯಿದೆ.
ಮೂರು ಇಂಟರ್‌ಚೇಂಜ್ ನಿಲ್ದಾಣಗಳು ಈ ಮಾರ್ಗದಲ್ಲಿದ್ದು, ಮುಂದಿನ ದಿನಗಳಲ್ಲಿ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪಾರ್ಕಿಂಗ್‌ನದ್ದೇ ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದೆ. ಹಸಿರು ಮಾರ್ಗದ ಆರ್.ವಿ.ರಸ್ತೆ ನಿಲ್ದಾಣ, ಗುಲಾಬಿ ಮಾರ್ಗದ (ಕಾಳೇನ ಅಗ್ರಹಾರ- ನಾಗವಾರ) ಜಯದೇವ ನಿಲ್ದಾಣ ಮತ್ತು ನೀಲಿ ಮಾರ್ಗದ (ರೇಷ್ಮೆ ಮಂಡಳಿ-ಕೆ.ಆರ್.ಪುರ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ರೇಷ್ಮೆ ಮಂಡಳಿ ನಿಲ್ದಾಣಗಳು ಇಂಟರ್‌ಚೇಂಜ್ ನಿಲ್ದಾಣಗಳಾಗಿವೆ.