ಬೆಂಗಳೂರು:ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ 'ನಮ್ಮ ಜಾತ್ರೆ'ಗೆ ವಿಧಾನಸೌಧದ ಮುಂಭಾಗದ ಬೃಹತ್ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸಂಜೆ ಚಾಲನೆ ನೀಡಿದರು.
ವಿಧಾನಸೌಧ ಮೆಟ್ಟಿಲುಗಳ ಮೇಲೆ ಕಲಾವಿದರು ಡೊಳ್ಳು ಕುಣಿತ, ಯಕ್ಷಗಾನ, ವೀರಗಾಸೆ, ಕಂಸಳೆ, ಹುಲಿ ವೇಷ, ಮಲ್ಲಕಂಬ, ನೃತ್ಯ, ನಗಾರಿ, ಗೊರವರ ಕುಣಿತ, ದಟ್ಟಿ ಕುಣಿತ, ಕೋಲಾಟ, ಸಿದ್ದಿ ಕುಣಿತ, ನಂದಿಧ್ವಜ, ಜಗ್ಗಲಗಿ, ಕೀಲು ಕುದುರೆ, ಗಾರುಡಿ ಗೊಂಬೆ, ಹಾಲಕ್ಕಿ ಕುಣಿತ, ಚಿಲಿಪಿಲಿ ಗೊಂಬೆ, ಮಹಿಳಾ ನಗಾರಿ, ಮರಗಾಲಯ ಕುಣಿತ, ಹುಲಿ ವೇಷ, ವೀರ ಮಕ್ಕಳ ಕುಣಿತ, ಸೋಮನ ಕುಣಿತ, ಚಂಡೆ, ಕರ್ ಕುಣಿತ, ಬಂಜಾರ ತಂಡ, ಸೋಲಿಗರ ಕುಣಿತ ತಮಟೆ ಸೇರಿದಂತೆ 50ಕ್ಕೂ ಕಲಾಪ್ರಕಾರಗಳಿಗೆ ಒಮ್ಮೆಲೆಗೆ ನೃತ್ಯ ಪ್ರಸ್ತುತಪಡಿಸಿದರು. ಹಲವು ವೈವಿಧ್ಯಮಯ ಹಾಗೂ ನಮ್ಮ ಸಂಸ್ಕೃತಿ, ಸೊಬಗನ್ನು ಪ್ರಸ್ತುತಪಡಿಸಿದ ಕಲೆಯು ನೆರೆದವರ ಮನಸೊರೆಗೊಂಡಿತ್ತು.
ತಾಯಿ ಭುವನೇಶ್ವರಿ ಇರುವ ಪಲ್ಲಕ್ಕಿ, ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ್ ಅವರ ಪಲ್ಲಕ್ಕಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಸುಮಾರು 500 ಮಂದಿ ಇರುವ ಕಲಾ ತಂಡಗಳು ವಿಧಾನಸೌಧದಿಂದ ಕಬ್ಬನ್ ಪಾರ್ಕ್ ರಸ್ತೆ, ಕಸ್ತೂರ ಬಾ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣದ ಮೂಲಕ ಮೆರವಣಿಗೆಯಲ್ಲಿ ಸಾಗಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ತಪ್ಪು, ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು: ಡಿ.ಕೆ. ಶಿವಕುಮಾರ್