ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಘನತೆ, ಗೌರವ, ನೈತಿಕತೆ ಇದ್ದರೆ ವಾಲ್ಮೀಕಿ ನಿಗಮ ಹಗರಣ ಪ್ರಕರಣದ ನೈತಿಕ ಹೊಣೆ ಹೊತ್ತು ಮೊದಲು ರಾಜೀನಾಮೆ ಕೊಡಬೇಕು. ಇದೊಂದು ಅಂತಾರಾಜ್ಯ ಭ್ರಷ್ಟಾಚಾರವಾದ್ದರಿಂದ ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡದಿಂದ 144 ಕೋಟಿ ರೂಪಾಯಿ ಓವರ್ ಡ್ರಾಫ್ಟ್ (ಸಾಲ) ಪಡೆದಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಗೆ ಇದನ್ನು ಪಡೆಯಲಾಯಿತೇ? ಆ ಕಂಪನಿಗಳಿಗೆ ಚುನಾವಣೆ ವೇಳೆ ಏಕೆ ಹಣ ಹಾಕಿದ್ದೀರಿ? ಆ ಕಂಪನಿಗಳ ಮಾಲೀಕರು ಯಾರು? ಆ ಕಂಪನಿಗಳು ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ, ನಾಗೇಂದ್ರರಿಗೆ, ಸಿದ್ದರಾಮಯ್ಯರಿಗೆ ಏನು ಸಂಬಂಧ? ಎಂದು ಕೇಳಿದರು.
ಈ ಓವರ್ ಡ್ರಾಫ್ಟ್ ಪಡೆಯಲು ಕ್ಯಾಬಿನೆಟ್ ನಿರ್ಣಯ ಮಾಡಿಲ್ಲವೇಕೆ? ಇದರೊಳಗೆ ನಾಗೇಂದ್ರ ಮಾತ್ರವಲ್ಲದೆ ಅನೇಕ ಅಧಿಕಾರಿಗಳಿದ್ದಾರೆ. ತೆಲಂಗಾಣದಲ್ಲಿ ಚುನಾವಣೆಗೆ ನಿಂತ ಅನೇಕ ಅಭ್ಯರ್ಥಿಗಳೂ ಇದರಲ್ಲಿದ್ದಾರೆ. ಹಣ ಕೊಟ್ಟ ಅನೇಕ ಮಂತ್ರಿಗಳೂ ಕರ್ನಾಟಕದಲ್ಲಿದ್ದಾರೆ. ಇದೊಂದು ಅಂತಾರಾಜ್ಯ ಭ್ರಷ್ಟಾಚಾರ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕಿದೆ ಎಂದರು.