ಮೈಸೂರು:ಲೋಕ ಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದು, ಗೆಲುವು ನನ್ನದಾಗಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮವನ್ನು ಟೀಕಿಸದೆ ಅಭಿವೃದ್ಧಿಯನ್ನು ಮುಂದಿರಿಸಿ ಚುನಾವಣೆ ಎದುರಿಸಿದ್ದು, ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ನಮಗೆ ಪೂರಕ ವಾತಾವರಣ ಸೃಷ್ಟಿಸಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಅಷ್ಟೇ ಅಲ್ಲದೆ ಜಾತಿ ಭೇದ ಮರೆತು ಜನ ಅಭಿವೃದ್ಧಿಯ ಮುಖ ನೋಡಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ ಎಂದರು.
ಚುನಾವಣೆಗಾಗಿ ಬಿಜೆಪಿ ಬಹಳಷ್ಟು ಕಸರತ್ತು ನಡೆಸಿತು. ಮಹಾರಾಜರ ನೆಪದಲ್ಲಿ ಜನರನ್ನು ಸೆಳೆಯುವ ಕುತಂತ್ರ ನಡೆಸಿದರು. ಮೈಸೂರಿನ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಬೈಯುವುದರಲ್ಲೇ ತಮ್ಮ ಭಾಷಣದ ಹೆಚ್ಚಿನ ಸಮಯವನ್ನು ಕಳೆದರು ಎಂದು ದೂರಿದರು.
ನನ್ನ ಜಾತಿಯ ಬಗ್ಗೆ ಪ್ರಶ್ನಿಸಿ ಹಿಂದಿನ ಸಂಸದ ಪ್ರತಾಪ ಸಿಂಹ ನನ್ನನ್ನು ಬೈದರು. ಆಗಲೂ ಅಭಿವೃದ್ಧಿ ಕುರಿತು ಮಾತನಾಡಿಲ್ಲ. ಚುನಾವಣೆಗೆ ಎರಡು ದಿನವಿರುವಾಗ ಕ್ಷೇತ್ರದಲ್ಲಿ ಕಾಣದಾಗಿದ್ದಾರೆ. ನನ್ನ ಗೆಲುವಿನ ಬಳಿಕ ಅವರನ್ನು ಭೇಟಿ ಮಾಡಿ ಸುಳ್ಳು ಮಾತನಾಡುತ್ತಿದ್ದದ್ದು ಹೇಗೆ ಎಂದು ತಿಳಿದುಕೊಳ್ಳುತ್ತೇನೆ ಎಂದು ಟೀಕಿಸಿದರು.
ಸಾಮಾನ್ಯನಾಗಿದ್ದ ನನಗೆ ಪಕ್ಷ ಟಿಕೆಟ್ ನೀಡಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳನ್ನು ಸಾಯುವವರೆಗೂ ಮರೆಯಲು ಸಾಧ್ಯವಿಲ್ಲ. ಮುಂದೆ ಅವರು ಹೇಳಿದ್ದನ್ನು ಪಾಲಿಸಿಕೊಂಡಿರುತ್ತೇನೆ. ನನ್ನ ಬೆಂಬಲಿಸಿದ ಪಕ್ಷದ ಮುಖಂಡರು, ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರನ್ನು ಸ್ಮರಿಸುತ್ತೇನೆ. ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಿದ ಆಯೋಗದ ಕಾರ್ಯಕ್ಕೂ ಅಭಿನಂದನೆ ಎಂದು ತಿಳಿಸಿದರು.