ಮೈಸೂರು :ಅರಮನೆಗಳ ನಗರಿ ಮೈಸೂರು ತನ್ನದೇ ಆದ ರಾಜ ಪರಂಪರೆಯ ಇತಿಹಾಸ ಹೊಂದಿದೆ. ದಸರಾ ಸಂದರ್ಭದಲ್ಲಿ ರಾಜ ಪರಂಪರೆಯ ವೈಭವ ಅರಮನೆಯೊಳಗಡೆ ಮತ್ತೊಮ್ಮೆ ಮೂಡಿ ಬರುತ್ತದೆ. ಇದಕ್ಕೆ ಕಾರಣ ಇಂದಿಗೂ ರಾಜ ಪಾರಂಪರೆಯ ರೀತಿ ರಾಜವಂಶಸ್ಥರು ನಡೆಸುವ ಶರನ್ನವರಾತ್ರಿ ಪೂಜೆ. ಇಂತಹ ಪೂಜೆ ಸಂದರ್ಭದಲ್ಲಿ ರಾಜ ವಂಶಸ್ಥರು ಹಾಗೂ ಇತರ ರಾಜ ಮನೆತನದವರು ಧರಿಸುವ ಪೇಟ ತನ್ನದೇ ಆದ ಇತಿಹಾಸ ಹೊಂದಿದೆ. ಈ ಹಿನ್ನೆಲೆ ಮೈಸೂರು ಪೇಟದ ವಿಶೇಷತೆಗಳೇನು? ಯಾವ ರೀತಿ ತಯಾರಾಗುತ್ತದೆ? ಸಾಮಾನ್ಯ ಪೇಟಕ್ಕೂ, ಮೈಸೂರು ಪೇಟಕ್ಕೂ ಇರುವ ವ್ಯತ್ಯಾಸಗಳೇನು? ಮೈಸೂರು ಪೇಟ ವಿಶೇಷ ಹೇಗೆ? ಈ ಎಲ್ಲಾ ಕುರಿತು ಮೈಸೂರು ಜರಿ ಪೇಟದ ಸ್ಪೆಷಲ್ ಸ್ಟೋರಿ ಇಲ್ಲಿದೆ.
ಮೈಸೂರಿನ ಪೇಟದ ಹಿನ್ನೆಲೆ ಮತ್ತು ವಿಶೇಷತೆ :ಈ ಬಗ್ಗೆಪೇಟ ತಯಾರಕಾದ ನಂದನ್ ಸಿಂಗ್ ಅವರು ಮಾತನಾಡಿ,ಮೈಸೂರಿನ ಪೇಟಕ್ಕೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಭಿನ್ನವಾದ ಪೇಟಗಳನ್ನು ಧರಿಸುತ್ತಿದ್ದರು. ಆಗಿನ ರಾಜ ಪರಂಪರೆಯಲ್ಲಿ ಪೇಟಗಳಿಗೆ ವಿಶೇಷ ಸ್ಥಾನ ಇತ್ತು. ಅದರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಪೇಟವನ್ನು ಬಹಳ ಇಷ್ಟಪಡುತ್ತಿದ್ದರು. ಅಂದಿನಿಂದಲೂ ಮೈಸೂರಿನ ಪೇಟಕ್ಕೆ ತನ್ನದೇ ಆದ ಇತಿಹಾಸವಿದೆ. ಸಾಮಾನ್ಯ ಪೇಟ ತಯಾರಿಸುವುದು ಸುಲಭ. ಆದರೆ, ಮೈಸೂರು ಪೇಟ ತಯಾರಿಕಾ ಕ್ರಮ ಬಹಳ ಕಷ್ಟ. ಆದರೂ ಕೂಡಾ ಇದು ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಹೆಚ್ಚಿಗೆ ಆಕರ್ಷಣೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ಸಾಮಾನ್ಯ ಪೇಟಕ್ಕೂ, ಮೈಸೂರಿನ ಪೇಟಕ್ಕೂ ವ್ಯತ್ಯಾಸ ಇದೆ :ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ಅತಿಥಿ ಗಣ್ಯರಿಗೆ ತೊಡಿಸುವ ಪೇಟ ಸಾಮಾನ್ಯ ಪೇಟವಾಗಿದೆ. ಇದನ್ನು ಯಾರು ಬೇಕಾದರೂ ಹಾಕಿಕೊಳ್ಳಬಹುದು. ಆದರೆ, ಮೈಸೂರಿನ ಪೇಟಕ್ಕೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಸಿಲ್ಕ್, ಮೈಸೂರು ಬನಾರಸ್ ಸೀರೆಯಿಂದ ಪೇಟ ತಯಾರಿಸಲಾಗುತ್ತದೆ. ಈ ಪೇಟದಲ್ಲಿ ನಾವು ಕಾಣುವ ಬಾರ್ಡರ್ಗಳು ಮತ್ತು ಸಣ್ಣ ಸಣ್ಣ ಮಣಿಗಳಿಗೂ ಕೂಡ ಹೆಚ್ಚಿನ ಕೆಲಸವನ್ನು ಮಾಡಬೇಕಾಗುತ್ತದೆ. ಹೀಗಾಗಿ ಮೈಸೂರಿನ ಪೇಟಕ್ಕೂ, ಸಾಮಾನ್ಯ ಪೇಟಕ್ಕೂ ಬಹಳ ವ್ಯತ್ಯಾಸವಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಪೇಟದ ತಯಾರಿಕೆ ಹೇಗೆ ಗೊತ್ತಾ? :ವಿಶೇಷವಾಗಿ ಮೈಸೂರು ಪೇಟವನ್ನು ತಯಾರಿಸಲು ಹೆಚ್ಚಿನ ಗುಣಮಟ್ಟದ ಮೈಸೂರು ಸಿಲ್ಕ್ ಸೀರೆಗಳ ಬಾರ್ಡರ್ಗಳಿಂದ ಪೇಟವನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ತಲೆಗೆ ಸುತ್ತುವ ಪೇಟದಂತೆ ಒಳ ಸುರುಳಿಗಳನ್ನು ಸುತ್ತಿಕೊಂಡು, ಹೆಚ್ಚಿನ ಆಕರ್ಷಣೆ ನೀಡುವ ಕೆಂಪು ಬಣ್ಣದ ಸೀರೆಯಲ್ಲಿ ಮಾಡಲಾಗುತ್ತದೆ ಎಂದರು.
ಪ್ರತಿಯೊಂದು ಪೇಟಕ್ಕೂ ತನ್ನದೇ ಆದ ಮಾದರಿ ಇರುತ್ತದೆ. ಮೈಸೂರಿನ ಪೇಟ ತಯಾರಿಸುವಾಗ ಪ್ರಮುಖವಾಗಿ ಗಂಡಭೇರುಂಡ ಲಾಂಛನದ ಡಾಲರ್ ಸೇರಿ, ಮುತ್ತು ಮತ್ತು ಮಣಿಗಳನ್ನು ಹಾಕಿ ಮಾಡಲಾಗುತ್ತದೆ. ಅದರಲ್ಲೂ ನಾವು ಅರಮನೆಯಲ್ಲಿ ಇರುವ ಪೇಂಟಿಂಗ್ಗಳ ಸಹಾಯದಿಂದ ಮತ್ತು ಮೈಸೂರಿನಲ್ಲಿ ರಾಜರ ಪ್ರತಿಮೆಗಳ ಸಹಾಯದಿಂದ ಪೇಟಗಳ ಆಕೃತಿ ಮತ್ತು ಅಳತೆ ಮಾಹಿತಿಯನ್ನು ಅಂದಾಜಿಸಿ ತಯಾರಿಸಲಾಗುತ್ತದೆ ಎಂದು ಹೇಳಿದರು.
ಮೈಸೂರಿನ ಪೇಟದಲ್ಲಿ ವಿವಿಧ ವಿಧಗಳು : ಮೈಸೂರಿನ ಪೇಟದಲ್ಲಿ ಸಾಕಷ್ಟು ವಿಧಗಳು ಇವೆ. ಹತ್ತನೆ ಚಾಮರಾಜೇಂದ್ರ ಒಡೆಯರ್ರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರವರೆಗೂ ಸಾಕಷ್ಟು ವಿಧಗಳಲ್ಲಿ ಮೈಸೂರು ಪೇಟವನ್ನು ಧರಿಸಿದ್ದರು. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲಾ ರೀತಿಯ ಪೇಟಗಳನ್ನು ಧರಿಸುತ್ತಿದ್ದರು. ರಾಜರ ಪೇಟ, ದಿವಾನರ ಪೇಟ ಹೀಗೆ ಹೆಚ್ಚಿನ ರೀತಿಯಲ್ಲಿ ವಿಭಿನ್ನ ಶೈಲಿಯಲ್ಲಿ ಪೇಟಗಳು ಇದ್ದವು. ಆಗಿನ ಕಾಲದ ರಾಜರು ತಮ್ಮ ಮದುವೆ ಸಮಾರಂಭಕ್ಕೆ ಮತ್ತು ಕಾರ್ಯಕ್ರಮಗಳಿಗೆ, ಖಾಸಗಿ ದರ್ಬಾರ್ ಸಮಯದಲ್ಲಿ ವಿವಿಧ ಆಕೃತಿಯ ಪೇಟಗಳನ್ನು ಧರಿಸುತ್ತಿದ್ದರು ಎಂದರು.
ವಂಶಪರಂಪರೆಯಾಗಿ ಬಂದ ಕಲೆ : ನನ್ನ ತಾತ ಮತ್ತು ತಂದೆಯೂ ಇದೇ ಕೆಲಸ ಮಾಡುತ್ತಿದ್ದರು. ನಾಟಕಗಳಿಗೆ ಉಡುಪುಗಳನ್ನು ತಯಾರಿಸುವುದು ಹಾಗೂ ಪೇಟಗಳಲ್ಲಿ ವಿಶೇಷವಾಗಿ ನನ್ನ ತಂದೆ ಪರಿಣತಿ ಹೊಂದಿದ್ದರು. ಚಿಕ್ಕವಯಸ್ಸಿನಿಂದಲೂ ಅದನ್ನು ನೋಡುತ್ತಾ ಬೆಳೆದ ನನಗೆ ಈ ಕಲೆ ಸುಲಭವಾಯಿತು. ಪೇಂಟಿಂಗ್ನಲ್ಲಿ ನನಗೆ ಹೆಚ್ಚಿನ ಆಸಕ್ತಿ. ಮನಸ್ಸಿಗೆ ಬೇಜಾರಾದಾಗ ಮೈಸೂರಿನ ಅರಮನೆಗೆ ಹೋಗುತ್ತಿದ್ದೆ. ಅಲ್ಲಿನ ಕಲಾಕೃತಿಗಳನ್ನು ನೋಡಿ ನಾನು ಏನಾದರೂ ಮಾಡಬೇಕು ಅನ್ನಿಸುತ್ತಿತ್ತು. ಇದರಿಂದ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಮೈಸೂರು ಪೇಟ ತಯಾರು ಮಾಡಿದ್ದೆ:ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದ್ದಾಗ, ಕಾರ್ಯಕ್ರಮದಲ್ಲಿ ಸನ್ಮಾನಿಸುವಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೇಟದ ಮಾದರಿಯಲ್ಲೇ ತಯಾರು ಮಾಡಿಕೊಟ್ಟಿದ್ದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಉದ್ಘಾಟನೆ ಸಮಯದಲ್ಲಿ ಕೆಂಪೇಗೌಡರ ಪೇಟದ ಮಾದರಿಯಲ್ಲಿ ಸಿದ್ದಪಡಿಸಿ ನೀಡಲಾಗಿತ್ತು ಎಂದು ತಿಳಿಸಿದರು.