ಮೈಸೂರು:ರೋಗಿಯ ಸಹೋದರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೈಸೂರಿನ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ಪಿ.ಪುಟ್ಟಸ್ವಾಮಿಗೆ ಕೋರ್ಟ್ ನಾಲ್ಕು ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ. ಮೈಸೂರಿನ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿತು.
ಶಿವಕುಮಾರ್ ಎಂಬುವರು 2017ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಶಸ್ತ್ರಚಿಕಿತ್ಸೆಗೆ ಮೂಳೆ ಶಸ್ತ್ರ ಚಿಕಿತ್ಸಕ ಡಾ.ಪುಟ್ಟಸ್ವಾಮಿ 40 ಸಾವಿರ ರೂ. ಲಂಚ ನೀಡುವಂತೆ ರೋಗಿಯ ಸಹೋದರ ಸಂಬಂಧಿ ದೇವರಾಜು ಬಳಿ ಕೇಳಿದ್ದರು. ಹಣ ನೀಡುವ ವಿಚಾರದಲ್ಲಿ ವೈದ್ಯರ ಬಳಿ ಮಾತನಾಡಿರುವುದನ್ನು ಮೊಬೈಲ್ನಲ್ಲಿ ಚಿತ್ರಿಕರಿಸಿಕೊಂಡಿದ್ದ ದೇವರಾಜು, ಆರಂಭದಲ್ಲಿ 2 ಸಾವಿರ ರೂ. ಲಂಚ ನೀಡಿದ್ದರು.
ಬಳಿಕ ಬಾಕಿ ಹಣ ನೀಡುವ ಮುನ್ನ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಮತ್ತೆ 26 ಸಾವಿರ ರೂ.ಗಳನ್ನು ಡಾ.ಪುಟ್ಟಸ್ವಾಮಿಗೆ ನೀಡುತ್ತಿರುವಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಎಸಿಬಿ ಇನ್ಸ್ಪೆಕ್ಟರ್ ಶೇಖರ್ ಅವರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯ ಅವರು ಆರೋಪ ವೈದ್ಯರ ಮೇಲಿನ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ. ಲೋಕಾಯುಕ್ತ ವಿಶೇಷ ಅಭಿಯೋಜಕಿಯಾಗಿ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು. ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕ ವಿ.ಜೆ.ಸಜೀತ್ ಉಸ್ತುವಾರಿ ವಹಿಸಿದ್ದರು.
ಇದನ್ನೂ ಓದಿ:ಶ್ರೀರಂಗಪಟ್ಟಣ ಮೂಡಲ ಬಾಗಿಲ ಆಂಜನೇಯ ಸ್ವಾಮಿ ದೇವಾಲಯ ಉತ್ಖನನಕ್ಕೆ ಕೋರಿ ಅರ್ಜಿ: ಸರ್ಕಾರಕ್ಕೆ ನೋಟಿಸ್ - excavation of Anjaneya Swamy Temple