ಮೈಸೂರು:ಜಗತ್ಪ್ರಸಿದ್ಧ ಮೈಸೂರು ದಸರಾದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಹಲವು ಸ್ತಬ್ಧಚಿತ್ರಗಳು ಪ್ರದರ್ಶನಗೊಂಡು ಗಮನ ಸೆಳೆದವು. ಈ ಪೈಕಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ 'ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ' ಕುರಿತ ಕಲಾಕೃತಿ ಪ್ರಥಮ ಬಹುಮಾನ ಗಳಿಸಿದೆ ಎಂದು ಸ್ತಬ್ಧಚಿತ್ರ ಉಪಸಮಿತಿಯ ವಿಶೇಷಾಧಿಕಾರಿಗಳು ಪ್ರಕಟಿಸಿದ್ದಾರೆ.
ಪ್ರಥಮ ಸ್ಥಾನ ಗಳಿಸಿದ ಸ್ತಬ್ಧಚಿತ್ರದ ವಿಶೇಷತೆ: 1924ರ ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಐತಿಹಾಸಿಕ 39ನೇ ಅಧಿವೇಶನ ನಡೆದಿತ್ತು. ಈ ವರ್ಷ ಅಧಿವೇಶನಕ್ಕೆ 100 ವರ್ಷ ತುಂಬುತ್ತಿದೆ. ಇನ್ನು ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ' ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಜಂಬೂ ಸವಾರಿಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಎರಡು ಮಹತ್ವದ ಘಟನೆಗಳನ್ನು ಆಕರ್ಷಕವಾಗಿ ಬಿಂಬಿಸುವ ಕಲಾಕೃತಿಯನ್ನು ವಿನ್ಯಾಸಗೊಳಿಸಲಾಗಿತ್ತು.
ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು. ಅಸ್ಪೃಶ್ಯತೆ ವಿರುದ್ಧ ಚಳವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕರೆನಿಸಿಕೊಂಡರು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವಣ್ಣ ಅವರನ್ನು "ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ" ಎಂದು ಘೋಷಿಸಿ ಮಹತ್ವದ ಹೆಜ್ಜೆಯನ್ನಿಟ್ಟರು. ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶಿಸಿದ್ದರು. ಈ ಮಹತ್ವದ ಘಟನೆಗೆ ಸಾಕ್ಷಿಯೆಂಬಂತೆ ಸ್ತಬ್ಧಚಿತ್ರದ ಮುಂಭಾಗದಲ್ಲಿ ಬಸವಣ್ಣನವರ ಮಾದರಿ ಪ್ರತಿಕೃತಿಯನ್ನು ಚಿತ್ರಿಸಲಾಗಿತ್ತು. ಬಸವಣ್ಣನವರು ಕುಳಿತ ಪೀಠದ ಕೆಳಭಾಗದಲ್ಲಿ ಕೂಡಲಸಂಗಮದ ಮುಖ್ಯದ್ವಾರದ ಮಾದರಿಯನ್ನು ಚಿತ್ರಿಸಲಾಗಿತ್ತು.
ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನವು ಒಂದು ಮಹತ್ವದ ಘಟನೆಯಾಗಿದೆ. ಇದು ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನವಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಪುನಃಸ್ಥಾಪಿಸುವುದು, ಅಸ್ಪೃಶ್ಯತೆ ಮತ್ತು ಇತರ ವಿಷಯಗಳ ಜೊತೆಗೆ ಚರಕ ಮತ್ತು ಖಾದಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುವುದು ಅವರ ಪ್ರಾಥಮಿಕ ಉದ್ದೇಶವಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಸಂಪೂರ್ಣ ಆವರಣವನ್ನು ವಿಜಯನಗರ ಎಂದು ಹೆಸರಿಸಲಾಗಿತ್ತು. ಬಿಳಿ, ಹಸಿರು, ಕೇಸರಿ ಮತ್ತು ಧ್ವಜದ ಮಧ್ಯ ಭಾಗದಲ್ಲಿ ಚರಕ ಇರುವ ತ್ರಿವರ್ಣ ಧ್ವಜವನ್ನು ಇಲ್ಲಿ ಮೊದಲಬಾರಿಗೆ ಹಾರಿಸಿದರು. ಇದರ ಮಾದರಿ ಪ್ರತಿಕೃತಿಯನ್ನು ಮಧ್ಯ ಭಾಗದಲ್ಲಿ ತೋರಿಸಲಾಗಿದೆ. ಅಧಿವೇಶನವು ಮರದ ಚೌಕಟ್ಟುಗಳಿಂದ ಸುತ್ತುವರಿದ ಎತ್ತರದ ವೇದಿಕೆಯಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ್ದರು. ಹಾಗೂ ಸಾರ್ವಜನಿಕರು ಈ ಭಾಷಣವನ್ನು ವೀಕ್ಷಿಸುತ್ತಿರುವ ಮಾದರಿ ಪ್ರತಿಕೃತಿಯನ್ನು ಮಧ್ಯ ಹಾಗೂ ಹಿಂಭಾಗದಲ್ಲಿ ವಿನ್ಯಾಸಗೊಳಿಸಲಾಗಿತ್ತು.