ಮೈಸೂರು:ಪ್ರಸಿದ್ಧ ಅಂಬಾವಿಲಾಸ ಅರಮನೆಯ ಮುಂಭಾಗ ಇಂದು ಜಂಬೂಸವಾರಿಯ ಅಂತಿಮ ರಿಹರ್ಸಲ್ ನಡೆಸಲಾಯಿತು. ಗಜಪಡೆ, ಅಶ್ವಪಡೆ ಹಾಗು ಪೊಲೀಸ್ ಇಲಾಖೆಯ ವಿವಿಧ ತುಕಡಿಗಳು ಪಾಲ್ಗೊಂಡಿದ್ದವು.
ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್, ಡಿಸಿಎಫ್ ಡಾ.ಪ್ರಭುಗೌಡ, ಸಿಎಆರ್ ಡಿಸಿಪಿ ಮಾರುತಿ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ, ಅರಮನೆಯ ಹೊರ ಆವರಣದಲ್ಲಿ ಫಿರಂಗಿ ಗಾಡಿಗಳಿಂದ 21 ಬಾರಿ ಕುಶಾಲತೋಪು ಸಿಡಿಸಲಾಯಿತು. ಸಿಎಆರ್ ಸಿಬ್ಬಂದಿ ಕುಶಾಲತೋಪು ಸಿಡಿಸಿದರು.
ಜಂಬೂಸವಾರಿ ಪುಷ್ಪಾರ್ಚನೆಯ ಕೊನೆಯ ರಿಹರ್ಸಲ್ (ETV Bharat) ಅಂತಿಮ ಹಂತದ ಈ ರಿಹರ್ಸಲ್ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಧನಂಜಯ ಆನೆ ಸಾಗಿದರೆ, ಅದನ್ನು ಹಿಂಬಾಲಿಸುತ್ತಾ ನೌಫತ್ ಆನೆ ಗೋಪಿ ಸಾಗಿತು. ಅದರ ಹಿಂದೆ ಸಾಲಾನೆಗಳು ಸಾಗಿದವು. ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿಗೆ ವೇದಿಕೆ ಮೇಲಿದ್ದ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು. ಅಭಿಮನ್ಯುವಿನ ಎಡದಲ್ಲಿ ಲಕ್ಷ್ಮಿ ಹಾಗೂ ಬಲಕ್ಕೆ ಹಿರಣ್ಯ ಕುಮ್ಕಿ ಆನೆಗಳಿದ್ದವು.
ಜಂಬೂಸವಾರಿಯಲ್ಲಿ 9 ಆನೆಗಳು ಭಾಗಿ: ಈ ಸಂದರ್ಭದಲ್ಲಿ ಡಿಸಿಎಫ್ ಪ್ರಭುಗೌಡ ಮಾಧ್ಯಮದವರೊಂದಿಗೆ ಮಾತನಾಡಿ, "ಇಂದು ಅಂತಿಮ ಹಂತದ ಪುಷ್ಪಾರ್ಚನೆಯ ರಿಹರ್ಸಲ್ ನಡೆಸಲಾಯಿತು. ಈ ಮೂಲಕ ದಸರಾ ಗಜಪಡೆಗೆ ನೀಡುತ್ತಿದ್ದ ಎಲ್ಲ ರೀತಿಯ ತಾಲೀಮುಗಳು ಮುಗಿದಿವೆ. ನಾಳೆ ಯಾವುದೇ ರೀತಿಯ ತಾಲೀಮು ಇರುವುದಿಲ್ಲ. ನಾಳೆ ಗಜಪಡೆಯನ್ನು ದರ್ಗಾಗೆ ಕರೆದೊಯ್ಯಲಾಗುವುದು. ಜಂಬೂಸವಾರಿ ಮೆರವಣಿಗೆಯಲ್ಲಿ 9 ಆನೆಗಳು ಭಾಗಿಯಾಗಲಿವೆ. ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ ಹಾಗೂ ಆತನ ಎಡಬಲದಲ್ಲಿ ಹಿರಣ್ಯ ಹಾಗೂ ಲಕ್ಷ್ಮಿ ಕುಮ್ಕಿ ಆನೆಗಳು ಸಾಗಲಿವೆ. ಧನಂಜಯ ನಿಶಾನೆ ಆನೆಯಾಗಿ, ಗೋಪಿ ನೌಪತ್ತು ಆನೆಯಾಗಿ ಸಾಗಲಿದ್ದಾನೆ. ಉಳಿದ ನಾಲ್ಕು ಆನೆಗಳು ಸಾಲಾನೆಗಳಾಗಿ ಸಾಗಲಿವೆ" ಎಂದು ಮಾಹಿತಿ ನೀಡಿದರು.
ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾತನಾಡಿ, "ಈ ಬಾರಿಯ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗುವುದು. ಮೈಸೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ. ಮಫ್ತಿಯಲ್ಲಿರುವ ಪೊಲೀಸರು ಎಲ್ಲೆಡೆ ನಿಗಾ ವಹಿಸಲಿದ್ದಾರೆ. ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಆಯಕಟ್ಟಿನ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ರಕ್ಷಣೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮೈಸೂರು ದಸರಾ: ಅರಮನೆ ಮುಂಭಾಗ ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು