ಬೆಂಗಳೂರು: ಮುಡಾದಲ್ಲಿ ಕಮಿಷನರ್ ಮೂಲಕ ಸಾವಿರಾರು ನಿವೇಶನಗಳ ಹೆಸರಲ್ಲಿ ಅಪಾರ ಹಣ ಲೂಟಿ ಮಾಡಿದ್ದಾರೆ. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ. ಕೆಟ್ಟ ವ್ಯವಸ್ಥೆ ವಿರುದ್ಧ. ಕಾಂಗ್ರೆಸ್ ಸರ್ಕಾರದಲ್ಲಿ ಬಡವರು, ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವಾಗಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಬರಲಿದ್ದಾರೆ. ಈ ನಿಟ್ಟಿನಲ್ಲಿ ರೂಟ್ ಮ್ಯಾಪ್ ಸಿದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
8 ದಿನಗಳ ಪಾದಯಾತ್ರೆ: ಬಿ.ಎಸ್.ಯಡಿಯೂರಪ್ಪ ಹಾಗು ಹೆಚ್.ಡಿ.ಕುಮಾರಸ್ವಾಮಿ ನಾಳೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಸಮೀಪದ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಯಾತ್ರೆ ಆರಂಭವಾಗಲಿದ್ದು, 8 ದಿನಗಳ ಕಾಲ ನಡೆಯಲಿದೆ ಎಂದು ವಿಜಯೇಂದ್ರ ಹೇಳಿದರು.
ಹೀಗಿರಲಿದೆ ಪಾದಯಾತ್ರೆ: ನಾಳೆ 16 ಕಿ.ಮೀ ಪಾದಯಾತ್ರೆ ಇರಲಿದೆ. ಎರಡನೇ ದಿನ ಭಾನುವಾರ ಮಂಜುನಾಥ ಕನ್ವೆನ್ಷನ್ ಹಾಲ್ ಬಿಡದಿಯಿಂದ ಆರಂಭಗೊಂಡು 22 ಕಿ.ಮೀ., 5ರಂದು ಕೆಂಗಲ್ ಕೆವಿಕೆ ಕನ್ವೆನ್ಷನ್ ಹಾಲ್ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 6ರಂದು ನಿಡಘಟ್ಟ ಸುಮಿತ್ರಾ ದೇವಿ ಕನ್ವೆನ್ಷನ್ ಹಾಲ್ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 5ನೇ ದಿನ ಮಂಡ್ಯ ಶಶಿಕಿರಣ್ ಕನ್ವೆನ್ಷನ್ ಹಾಲ್ನಿಂದ ಆರಂಭವಾಗಿ 16 ಕಿಮೀ, 8ರಂದು ಗುರುವಾರ ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿಯಿಂದ, 9ರಂದು ಶುಕ್ರವಾರ ಶ್ರೀರಂಗಪಟ್ಟಣ ಮಂಜುನಾಥ ಕಲ್ಯಾಣಮಂಟಪದಿಂದ ಪಾದಯಾತ್ರೆ ಆರಂಭವಾಗಲಿದೆ. 10ರಂದು ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ ಎಂದು ಅವರು ವಿವರ ನೀಡಿದರು.
ಇನ್ನು, ನಿನ್ನೆ ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿಗಳಿಲ್ಲದೇ ಸಚಿವ ಸಂಪುಟದ ಸಭೆ ನಡೆದಿದೆ. ರಾಜ್ಯಪಾಲರ ನೋಟಿಸ್‌ಗೆ ಉತ್ತರ ಕೊಡಬೇಕಾದ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ನಡೆಸಿ ರಾಜ್ಯಪಾಲರನ್ನು ಪ್ರಶ್ನಿಸುವ ಕೆಲಸವಾಗಿದೆ ಎಂದು ಅವರು ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದರು.