ಮೈಸೂರು: 2024-2025ನೇ ಸಾಲಿನ ಗೌರಿ-ಗಣೇಶ ಚತುರ್ಥಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಲೈಸನ್ಸ್ ನೀಡದಿರಲು ಮತ್ತು ಲೈಸನ್ಸ್ ಪಡೆಯದೇ ಅನಧಿಕೃತವಾಗಿ ತಯಾರಿಕೆ, ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ತಕ್ಷಣ ಜರುಗಿಸಲು ಆದೇಶಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್, ಬಣ್ಣ ಲೇಪಿತ ವಿಗ್ರಹಗಳನ್ನು ಯಾವುದೇ ನದಿ, ಕಾಲುವೆ, ಕೆರೆ ಮತ್ತು ಬಾವಿಗಳಲ್ಲಿ ನಿಮಜ್ಜನ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಐಪಿಸಿ 1860ರ ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಪರಿಸರ ಸ್ನೇಹಿ ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಮನೆಯಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು. ಪರಿಸರದ ಮೇಲೆ ಬಾರಿ ಪರಿಣಾಮ ಬೀರುವಂತಹ ಪಿಒಪಿಯಿಂದ ತಯಾರಿಸಿದ ಹಾಗೂ ರಾಸಾಯನಿಕ ಬಣ್ಣಗಳನ್ನು ಒಳಗೊಂಡ ಗೌರಿ-ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಗೌರಿ-ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸುವುದು. ಪಾರಂಪರಿಕ ಗೌರಿ-ಗಣೇಶೋತ್ಸವಕ್ಕಾಗಿ, ಗಣೇಶೋತ್ಸವ ಸಮಿತಿಗಳು, ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೊರೇಷನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯತಕ್ಕದು ಹಾಗೂ ಒಂದು ವಾರ್ಡಿಗೆ, ಗ್ರಾಮಕ್ಕೆ ಒಂದು ಸಾರ್ವಜನಿಕ ಗೌರಿ-ಗಣೇಶೋತ್ಸವನ್ನು ಆಚರಿಸಲು ಪ್ರೋತ್ಸಾಹಿಸುವುದು.
- ಪಾರಂಪರಿಕ ಗೌರಿ-ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಮತ್ತು ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗೌರಿ-ಗಣೇಶ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಸಂಚಾರಿ ವಿಸರ್ಜನಾ ವ್ಯವಸ್ಥೆ ಅಥವಾ ಕೃತಕ ಟ್ಯಾಂಕರ್ಗಳಲ್ಲಿ ನಿಮಜ್ಜನ ಮಾಡಬೇಕು.
- ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಪಟಾಕಿಯ ಹೊಗೆ ವಿಷಪೂರಿತ, ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ. ಕರ್ಕಶ ಶಬ್ಧವೂ ಕಿವಿಗೆ ಹಾನಿಕರ. ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಹಾಕುವ ಬದಲು ಕಸದ ವಾಹನ ಬಳಸುವುದು. ಹಬ್ಬದ ದಿನಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಕೆ ಮಾಡಬಾರದು.
- ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಸಂಬಂಧದ ಬಗ್ಗೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳ ಅನುಷ್ಠಾನದ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಈ ಸಂಬಂಧ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸಂಬಂಧಪಟ್ಟ ಇಲಾಖೆಗಳು ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಗಣೇಶೋತ್ಸವ ಆಚರಣೆಗೆ ಏಕಗವಾಕ್ಷಿ ಪದ್ದತಿಯಲ್ಲಿ ಒಂದೇ ಸೂರಿನಡಿ ಅನುಮತಿ ಪತ್ರ: ಬಿಬಿಎಂಪಿ - Ganesha Festival