ಮೈಲಾರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಪ್ರತಿಕ್ರಿಯೆ ವಿಜಯನಗರ:ಜಿಲ್ಲೆಯ ಹೂವಿನಹಡಗಲಿ ತಾಲೂಕು ಮೈಲಾರ ಗ್ರಾಮದ ಮೈಲಾರ ಲಿಂಗೇಶ್ವರ ಕಾರ್ಣಿಕ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಪ್ರತಿವರ್ಷದಂತೆ ಈ ವರ್ಷ ಸಹ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪ ಡೆಂಕನರಡಿಯಲ್ಲಿ ಸಂಪಾಯಿತಲೇ ಪರಾಕ್ ಎಂದು ನಿನ್ನೆ ಕಾರ್ಣಿಕ ನುಡಿದಿರುವುದು ವೈಯಕ್ತಿಕವಾದದ್ದು ಎಂದು ಮೈಲಾರ ಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆರೋಪಿಸಿದ್ದಾರೆ.
ಶತಮಾನಗಳಿಂದ ಲಕ್ಷಾಂತರ ಭಕ್ತರ ಧಾರ್ಮಿಕ ಕೇಂದ್ರವಾಗಿರುವ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಸೋಮವಾರ ಹೊರಬಿತ್ತು. ಮೈಲಾರ ಗ್ರಾಮದ ಡೆಂಕನಮರಡಿಯಲ್ಲಿ ಈ ಕಾರ್ಣಿಕೋತ್ಸವ ಜರುಗಿತು. ಈ ಗೊರವಯ್ಯನ ಕಾರ್ಣಿಕ ಅರ್ಥೈಸಬೇಕಾಗಿದ್ದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು, ''ಇದು ದೇವರವಾಣಿಯಲ್ಲ. ಗೊರವಪ್ಪ ಬೇರೆಯವರ ಅಣತಿಯಂತೆ ಕಾರ್ಣಿಕ ನುಡಿದಿದ್ದು, ಇದು ಸುಳ್ಳು ಕಾರ್ಣಿಕ. ಈ ಕುರಿತಂತೆ ನಾನು ನ್ಯಾಯಾಲಯದ ಮೆಟ್ಟಿಲೇರುತ್ತೇನೆ'' ಎಂದು ತಿಳಿಸಿದ್ದಾರೆ.
ಕಾರ್ಣಿಕ ಅರ್ಥೈಸಿದ ಕಾಗಿನೆಲೆ ಶ್ರೀಗಳು:ಗೊರವಪ್ಪ ರಾಮಣ್ಣ ಕಾರ್ಣಿಕ ನುಡಿಯುತ್ತಿದ್ದಂತೆ ಅದನ್ನು ಅರ್ಥೈಸುವುದು ಮೈಲಾರ ಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್. ಪ್ರತಿವರ್ಷ ಕಾರ್ಣಿಕ ನುಡಿದ ತಕ್ಷಣ ಅರ್ಥೈಸಬೇಕಾಗಿದ್ದ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಪ್ರಸ್ತುತ ವರ್ಷದ ಕಾರ್ಣಿಕವನ್ನು ಅರ್ಥೈಸಿದರು. ಈ ವರ್ಷ ಮಳೆ, ಬೆಳೆ ಸಮೃದ್ಧವಾಗಲಿದೆ ಎಂದು ಕಾಗಿನೆಲೆ ಶ್ರೀಗಳು ಅರ್ಥೈಸಿದರು.
ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆರೋಪ:''ಈ ಮಧ್ಯೆ ಕಾರ್ಣಿಕವನ್ನು ಗೊರವಪ್ಪ ರಾಮಣ್ಣ ಶ್ರೀಕ್ಷೇತ್ರದ ವಿಧಿವಿದಾನದಂತೆ ನುಡಿದಿಲ್ಲ. ಮೈಲಾರಲಿಂಗೇಶ್ವರ ವಾಣಿಯಂತೆ ಗೊರವಪ್ಪ ಕಾರ್ಣಿಕ ನುಡಿದಿಲ್ಲ. ಬೇರೆ ಯಾರದ್ದೋ ಅಣತಿಯಂತೆ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಇದು ಸತ್ಯವಲ್ಲ ಎಂದು ಶ್ರೀಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆರೋಪಿಸಿದರು.
ಪ್ರಸಕ್ತ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ಸತ್ಯವಾಗುವದಿಲ್ಲ. ಜಾತ್ರಾ ಸಂಪ್ರದಾಯಗಳ ನಿಯಮಗಳನ್ನು ಗೊರವಯ್ಯ ಗಾಳಿಗೆ ತೂರಿದ್ದಾರೆ. ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೇ ಕಾರ್ಣಿಕ ನುಡಿ ನುಡಿದಿದ್ದಾರೆ. ಇದು ದೈವವಾಣಿಯಲ್ಲ, ಗೊರವಯ್ಯ ರಾಮಪ್ಪನ ವಾಣಿ. ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಅವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕ್ರಮ ತೆಗೆದುಕೊಳ್ಳದಿದ್ದರೆ, ಪ್ರತಿ ವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಉಂಟಾಗುತ್ತದೆ'' ಎಂದು ತಿಳಿಸಿದರು.
''ಈ ವರ್ಷದ ಕಾರ್ಣಿಕ ನುಡಿಯ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಯಾರದ್ದೋ ಅಣತಿಯಂತೆ ಕಾರ್ಣಿಕ ನುಡಿದಿದ್ದಾರೋ ಗೊತ್ತಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಜಿಲ್ಲಾಧಿಕಾರಿಗಳೇ ಇದ್ದಾರೆ. ಅವರೇ ಕ್ರಮ ತೆಗೆದುಕೊಳ್ಳಬೇಕು, ಭಕ್ತರ ಎದುರು ಈ ರೀತಿ ಮಾಡಬಾರದು. ಈ ಬಗ್ಗೆ ಕ್ರಮವಹಿಸದಿದ್ದರೆ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.
ಇದನ್ನೂ ಓದಿ:"ಸಂಪಾಯಿತಲೇ ಪರಾಕ್".. ರೈತರಿಗೆ ಈ ಬಾರಿ ಸಂತಸ ತಂದ ಮೈಲಾರ ಲಿಂಗೇಶ್ವರ ಕಾರ್ಣಿಕ