ಬೆಳಗಾವಿ: ಜಿಲ್ಲೆಯಲ್ಲಿ ಹಿಂದೂ ಬಾಣಂತಿ ಮಹಿಳೆಯನ್ನು ಮುಸ್ಲಿಂ ಕುಟುಂಬವೊಂದು ಆರೈಕೆ ಮಾಡುವ ಮೂಲಕ ಕೋಮು ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಿದೆ. ಒಂದೆಡೆ ತಾಯಿ ಮತ್ತು ಮಗುವನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಡುತ್ತಿರುವುದು. ಮತ್ತೊಂದೆಡೆ ಆರೈಕೆ ಮಾಡಿದ ಮುಸ್ಲಿಂ ಕುಟುಂಬಕ್ಕೆ ಕೃತಜ್ಞತೆ ತಿಳಿಸುತ್ತಿರುವ ಮಹಿಳೆ. ಇನ್ನೊಂದೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿರುವುದು. ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ.
ಸಂದಿಗ್ಧ ಪರಿಸ್ಥಿತಿಗೆ ಸ್ಪಂದಿಸಿದ ಮಹಿಳೆ: ಹೌದು.., ಎಪ್ರಿಲ್ 14 ರಂದು ಗೋಕಾಕ್ ತಾಲೂಕಿನ ದಂಡಾಪುರ ಗ್ರಾಮದ ಶಾಂತವ್ವ ಕುಮಾರ ನಿಡಸೋಸಿ ಎಂಬ ಗರ್ಭಿಣಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆಗ ಆ ಬಾಣಂತಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆಗ ಈ ತಾಯಿ, ಮಗುವಿನ ಸಹಾಯಕ್ಕೆ ಬಂದಿದ್ದು ಓರ್ವ ಮುಸ್ಲಿಂ ಮಹಿಳೆ. ಜಾತಿ, ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರೇ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಶಮಾ ರಿಜ್ವಾನ್ ದೇಸಾಯಿ.
ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಾಂತವ್ವಳ ಪಕ್ಕದ ಬೆಡ್ನಲ್ಲಿ ಶಮಾ ಅವರ ತಂಗಿ ಅಡ್ಮಿಟ್ ಆಗಿದ್ದರು. ಅವರನ್ನು ನೋಡಲು ಹೋದಾಗ ಬಾಣಂತಿ ಶಾಂತವ್ವ ಮತ್ತು ಆಗಷ್ಟೆ ಜನಿಸಿದ ಮಗುವಿನ ಸ್ಥಿತಿ ಕಂಡು ಶಮಾ ಮಮ್ಮಲ ಮರುಗಿದ್ದಾರೆ. ತಕ್ಷಣವೇ ಆ ಬಾಣಂತಿಯ ಕಷ್ಟಕ್ಕೆ ಸ್ಪಂದಿಸಿದ ಶಮಾ ಆಸ್ಪತ್ರೆಯಲ್ಲಿ 7 ದಿನ ತಾಯಿ ಮತ್ತು ಮಗುವಿನ ಆರೈಕೆ ಮಾಡಿದ್ದಾರೆ. ಆ ಬಳಿಕ ಗೋಕಾಕ್ನ ನವಿ ಗಲ್ಲಿಯ ತಮ್ಮ ನಿವಾಸಕ್ಕೆ ಬಾಣಂತಿ ತಾಯಿ ಶಾಂತವ್ವ ಹಾಗೂ ಮಗುವನ್ನು ಕರೆದುಕೊಂಡು ಹೋದ ಶಮಾ, ಬರೋಬ್ಬರಿ 40 ದಿನ ಉಪಚರಿಸಿದ್ದಾರೆ. ಯಾವುದೇ ಕೊರತೆ ಆಗದಂತೆ ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿದ್ದಾರೆ.
ಈಗ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ನಿನ್ನೆ ಭಾನುವಾರ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ತಾಯಿ ಮತ್ತು ಮಗುವನ್ನು ಅವರ ಊರಿಗೆ ಕಳಿಸಿಕೊಟ್ಟರು. ಸ್ವಂತ ತಂದೆ ತಾಯಿಯನ್ನೇ ನೋಡಿಕೊಳ್ಳಲು ಮಕ್ಕಳು ಹಿಂದೇಟು ಹಾಕುತ್ತಾರೆ. ಅಂತಹದಲ್ಲಿ ಯಾವುದೇ ಸಂಬಂಧವೂ ಇಲ್ಲದ. ಅದರಲ್ಲೂ ಬೇರೆ ಧರ್ಮದ ಮಹಿಳೆ ಎಂಬುದನ್ನೂ ಲೆಕ್ಕಿಸದೇ ಶಮಾ ಮಾಡಿದ ಮಹತ್ಕಾರ್ಯಕ್ಕೆ ಅಭಿನಂದನೆಗಳ ಮಹಾಪುರವೇ ಹರಿದುಬರುತ್ತಿದೆ. ಅಲ್ಲದೇ ಶಮಾ ಮತ್ತು ರಿಜ್ವಾನ್ ದಂಪತಿಯನ್ನು ಪೊಲೀಸರು ಸತ್ಕರಿಸಿ ಗೌರವಿಸಿದರು.