ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಎರಡನೇ ಬಾರಿಗೆ ಸಣ್ಣ ರಿಲೀಫ್ ಸಿಕ್ಕಿದೆ. ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ ಹೈಕೋರ್ಟ್, ಅಲ್ಲಿಯವರಗೂ ಯಾವುದೇ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿದೆ.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆಯಿತು. ಸಿಎಂ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಭ್ರಷ್ಟಾಚಾರ ತಡೆ ಕಾಯ್ದೆ 17ಎ ಅಡಿಯಲ್ಲಿ ರಾಜ್ಯಪಾಲರ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
17ಎ ಮಾನದಂಡ ಪಾಲನೆಯಾಗಿಲ್ಲ, ಪಿಸಿ ಆಕ್ಟ್ 17ಎ ಅಡಿ ಪೂರ್ವಾನುಮತಿ ಅಗತ್ಯ, ಪೊಲೀಸ್ ಅಧಿಕಾರಿ ಅನುಮತಿ ಪಡೆಯದೆಯೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸ್ಸು, ನಿರ್ಧಾರಗಳ ಕುರಿತು ತನಿಖೆ ಇರಬೇಕು, ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ. 17ಎ ಪಾಲನೆಯಾಗದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಾಸಿಕ್ಯೂಷನ್ಗೆ ಅನುಮತಿ ಬೇಕಾಗಿಲ್ಲ ಎಂದು ಹೇಳಿಕೆ ನೀಡುವ ಹಿನ್ನೆಲೆಯಲ್ಲಿ ದೂರುದಾರ ಟಿಜೆ ಅಬ್ರಹಾಂಗೆ ದಂಡ ವಿಧಿಸಿ ದೂರನ್ನು ವಜಾಗೊಳಿಸಬೇಕು. ಪ್ರಾಸಿಕ್ಯೂಷನ್ಗೆ ನೀಡಿರುವ ಅನುಮತಿಯನ್ನು ರಾಜ್ಯಪಾಲರು ಹಿಂಪಡೆಯಬೇಕು, ರಾಜ್ಯಪಾಲರ ಸಮಯ ವ್ಯರ್ಥ ಮಾಡಿದ್ದಕ್ಕೆ ರಾಜ್ಯಪಾಲರು ದಂಡ ವಿಧಿಸಬೇಕು, ದೂರು ವಜಾಗೊಳಿಸಬೇಕು, ರಾಜ್ಯಪಾಲರ ಮುಂದೆ ಒಂದು ಹೇಳಿಕೆ, ಕೋರ್ಟ್ ಮುಂದೆ ಒಂದು ಹೇಳಿಕೆ ನೀಡಿದ್ದಾರೆ. ದ್ವಂದ್ವ ಹೇಳಿಕೆ ಹಿನ್ನೆಲೆಯಲ್ಲಿ ದಂಡ ವಿಧಿಸಿ ದೂರು ವಜಾಗೊಳಿಸಲು ಮನವಿ ಮಾಡಿದರು.
ಇಬ್ಬರು ಆರೋಪಿಗಳ ದೂರು ಕುರಿತು ಶೋಕಾಸ್ ನೋಟಿಸ್ ನೀಡಿಲ್ಲ, ತರಾತುರಿಯಲ್ಲಿ ರಾಜ್ಯಪಾಲರು ವಿವೇಚನೆ ಬಳಸದೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇಲ್ಲಿ ಸ್ವಾಭಾವಿಕ ನ್ಯಾಯದ ಪಾಲನೆಯಾಗಿಲ್ಲ ಎಂದು ಹಲವು ಪ್ರಕರಣಗಳ ಕುರಿತು ಸಿಎಂ ಪರ ವಕೀಲರು ಉಲ್ಲೇಖಿಸಿ, ಸುದೀರ್ಘ ವಾದ ಮಂಡನೆ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ್ದು, ಅಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಂತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.
ಎರಡು ದಿನಗಳ ಕಾಲ ವಿಚಾರಣೆ ಮುಂದೂಡಿಕೆಯಾಗಿದ್ದರಿಂದ ಮತ್ತೆ ಎರಡು ದಿನ ಸಿಎಂಗೆ ರಿಲೀಫ್ ಸಿಕ್ಕಂತಾಗಿದೆ. ಶನಿವಾರ ಬೆಳಗ್ಗೆ 10.30ಕ್ಕೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ಸಿಎಂಗೆ ರಿಲೀಫ್ ಸಿಕ್ಕಿದೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತ ಎನ್ನಲಾದ ಮಹಿಳೆ ಅಪಹರಣ ಆರೋಪ; ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್ - Kidnap Case