ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಅನುಮತಿ ಆದೇಶವನ್ನು ವಿರೋಧಾತ್ಮಕವಾಗಿ ನೋಡದೆ ಸಾರ್ವಜನಿಕ ಆಡಳಿತದಲ್ಲಿ ಪರಿಶುದ್ಧತೆಯ ಸಲುವಾಗಿ ನೋಡಬೇಕಾಗುತ್ತದೆ ಎಂದು ದೂರುದಾರರ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ತಮ್ಮನ್ನು ವಿಚಾರಣೆಗೆ ಒಳಪಡಿಸುವಂತೆ ರಾಜ್ಯಪಾಲರು ನೀಡಿದ್ದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅವರಿದ್ದ ಪೀಠಕ್ಕೆ ವಕೀಲರು ವಿವರಿಸಿದರು.
ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿ ಹಿರಿಯ ವಕೀಲ ಕೆ.ಜಿ.ರಾಘವನ್, ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಿಗೇ ರಾಜ್ಯ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರವಾಗಿದೆ. ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯ ವಿರುದ್ಧ ತನಿಖೆ ಕೋರಲಾಗಿದೆ. ಕೊನೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಮುಕ್ತವಾಗಬಹುದು. ಆದರೆ, ನ್ಯಾಯಾಲಯವು ಇಂಥ ವಿಚಾರಗಳಲ್ಲಿ ತನಿಖೆಗೆ ಅವಕಾಶ ನೀಡಬೇಕಾಗುತ್ತದೆ ಎಂದು ವಾದ ಮಂಡಿಸಿದರು.
ಮುಡಾದಲ್ಲಿ 2003-09ರ ನಡುವೆ 60:40 ಯೋಜನೆ ಜಾರಿಯಲ್ಲಿತ್ತು. ಆದರೆ, ಪಾರ್ವತಿ ಅವರಿಗೆ ನಿವೇಶನ ಹಂಚಲು 2015ರಲ್ಲಿ 50:50 ಯೋಜನೆಯನ್ನು ಮುಡಾ ಅಳವಡಿಸಿಕೊಂಡಿದೆ. ಯಾವ ನಿಬಂಧನೆಯಡಿ 14 ನಿವೇಶನಗಳನ್ನು ನೀಡಲಾಗಿದೆ? ಹಲವು ಸಂದರ್ಭದಲ್ಲಿ ವಾಸ್ತವಿಕ ಅಂಶಗಳನ್ನು ಮರೆಮಾಚುವುದು ದುರುದ್ದೇಶಕ್ಕೆ ಆಧಾರ ಒದಗಿಸಲಿದೆ. ಮುಡಾ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ, ಆ ಜಮೀನಿನ ಮೌಲ್ಯ 3.24 ಲಕ್ಷ ರೂಪಾಯಿ ಆಗಿತ್ತು. ಹೀಗಿರುವಾಗ ಯಾವ ಮೌಲ್ಯ ಆಧರಿಸಿ 14 ನಿವೇಶನಗಳನ್ನು ನೀಡಲಾಗಿದೆ? ಮುಡಾ ಯಾವುದೇ ರೀತಿಯಲ್ಲಿಯೂ ವಿವೇಚನ ಬಳಸಿಲ್ಲ. ಸುಣ್ಣಕ್ಕೆ ಬೆಣ್ಣೆ ವಿನಿಮಯವೇ? ಈ ಪ್ರಕರಣದಲ್ಲಿ ಅದನ್ನೇ ಮಾಡಲಾಗಿದ್ದು, ಅದೇ ಆರೋಪವಾಗಿದೆ. ದುಬಾರಿ ಮೌಲ್ಯ ಹೊಂದಿರದ 3.16 ಎಕರೆ ಜಮೀನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನ ಹಂಚಿಕೆ ಮಾಡಲಾಗಿದೆ. ಇದು ಸರಿಯೋ, ತಪ್ಪೋ ಅದರ ತನಿಖೆ ಆಗಬೇಕು ಎಂದು ಪೀಠಕ್ಕೆ ವಿವರಿಸಿದರು.