ಮೈಸೂರು:''ಮುಡಾ ಪ್ರಕರಣದಲ್ಲಿಲೋಕಾಯುಕ್ತ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಬಳಿಕ ನನ್ನ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ನಾನು ಹೈಕೋರ್ಟ್ಗಾಗಲಿ, ಸುಪ್ರೀಂ ಕೋರ್ಟ್ಗಾಗಲಿ ಮೇಲ್ಮನವಿ ಸಲ್ಲಿಸುವುದಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೇ ನನ್ನ ಬಳಿಯಿರುವ ಸಾಕ್ಷಿಗಳನ್ನು ಇಟ್ಟುಕೊಂಡು ಸಾಬೀತುಪಡಿಸುವತ್ತ ಹೋರಾಟ ಮಾಡುತ್ತೇನೆ'' ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಲೋಕಾಯುಕ್ತರು ಕೋರ್ಟ್ಗೆ ವರದಿ ಸಲ್ಲಿಸಿರುವ ಬಗ್ಗೆ ನಗರದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಅವರು, ''ಸಾಕಷ್ಟು ದಾಖಲೆಗಳನ್ನು ನೀಡಿದ್ದೇನೆ. ಉಚ್ಚ ನ್ಯಾಯಾಲಯ ಈ ಹಿಂದೆ ನೀಡಿರುವ 197 ಪುಟಗಳ ವಿವರವಾದ ತೀರ್ಪಿನಲ್ಲೇ ಸಾಕಷ್ಟು ಸಾಕ್ಷಿಗಳಿವೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೂಡ ನಾನು ನೀಡಿರುವ ಸಾಕ್ಷಿ ಆಧಾರಗಳನ್ನು ಪರೀಶೀಲನೆ ನಡೆಸಿದ ಬಳಿಕವೇ ತನಿಖೆಗೆ ಆದೇಶ ನೀಡಿತ್ತು. ನ್ಯಾಯಾಲಯಗಳೇ ತನಿಖೆ ಆಗಬೇಕು ಎಂದು ತೀರ್ಪು ನೀಡಿದರೂ ತನಿಖಾಧಿಕಾರಿ ಸಾಕ್ಷಗಳಿಲ್ಲ ಎಂದು ವರದಿ ಸಲ್ಲಿಸಿರುವುದನ್ನು ನೋಡಿದರೆ, ಅವರು ಪ್ರಭಾವಕ್ಕೆ ಒಳಗಾಗಿ ತಮ್ಮ ಕರ್ತವ್ಯದ ವಿರುದ್ಧ ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ'' ಎಂದು ಆರೋಪಿಸಿದರು.
''ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ ಸಹ ಯಾವ ಆಧಾರದ ಮೇಲೆ ಕೊರತೆಯಿದೆ ಎಂದು ಹೇಳಿರುವುದು ನಿಜಕ್ಕೂ ಸಹ ಅಚ್ಚರಿಯ ಸಂಗತಿ. ಸಾಮಾನ್ಯ ವ್ಯಕ್ತಿಯೂ ಕೂಡ ಕೇವಲ ಎರಡು ಮೂರು ಸಾಕ್ಷಿ ನೋಡಿದರೂ ಅಪರಾಧ ಕೃತ್ಯ ನಡೆದಿದೆ ಎಂದು ಸ್ಷಷ್ಟವಾಗಿ ಹೇಳುತ್ತಾರೆ. ಆದರೂ ಕೂಡ ತನಿಖಾಧಿಕಾರಿಗೆ ಇದು ಗೊತ್ತಾಗಲಿಲ್ಲವೆಂದರೆ, ಅವರ ಬೌದ್ಧಿಕ ಮಟ್ಟ ಎಷ್ಟಿದೆ ಎಂದು ರಾಜ್ಯದ ಜನತೆ ಗಮನಿಸಬೇಕು'' ಎಂದರು.
ನಟೇಶ್ ಪ್ರಕರಣದಲ್ಲೂ ಕಾನೂನು ಕ್ರಮ ಆಗಲಿದೆ:''ಮುಡಾ ಮಾಜಿ ಆಯುಕ್ತ ನಟೇಶ್ ಪ್ರಕರಣದ ತನಿಖೆ ಕೂಡ ನಡೆಯುತ್ತದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇ.ಡಿ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲಿಂದ ತೀರ್ಪು ಬಂದ ಬಳಿಕ ಕಾನೂನಿನ ಕ್ರಮ ಆಗುತ್ತದೆ'' ಎಂದು ಸ್ನೇಹಮಯಿ ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.