ಬೆಳಗಾವಿ: ಇಂಥ ತಾಯಿ ನನಗೆ ಸಿಕ್ಕಿದ್ದಕ್ಕೆ ದೇವರಿಗೆ ನಾನು ಎಷ್ಟು ಬಾರಿ ಕೈ ಮುಗಿದರೂ ಕೂಡ ಕಡಿಮೆ. ಪ್ರತಿಯೊಬ್ಬರು ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರನ್ನು ಕರೆಸುತ್ತಾರೆ. ಆದರೆ, ನನಗೆ ನನ್ನ ತಾಯಿಯೇ ಸ್ಟಾರ್ ಪ್ರಚಾರಕಿ. ನನ್ನ ಪಾಲಿನ ದೇವರು ಮತ್ತು ನನ್ನ ಹಿಂದಿರುವ ದೊಡ್ಡ ಶಕ್ತಿ. ತಾಯಿಯವರು ಮಾಡಿರುವಂತಹ ಒಳ್ಳೆಯ ಕೆಲಸವನ್ನೇ ಮಾಡುತ್ತೇನೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.
ಈಟಿವಿ ಭಾರತ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ಬೆಳಗಾವಿ ಮಣ್ಣಿನಲ್ಲಿ ಹುಟ್ಟಿದ ಯುವಕ ಚುನಾವಣೆಗೆ ನಿಂತಿದ್ದಾನೆ. ಪ್ರತಿಸ್ಪರ್ಧಿ ಯಾರಿದ್ದಾರೆ ಅಂತಾ ಜನರಿಗೆ ಗೊತ್ತಿದ್ದು, ಮನೆ ಮಗನನ್ನು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ತಾಯಿ ಕುರಿತ ಟೀಕೆಗೆ ಮೃಣಾಲ್ ಬೇಸರ; ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೆಲವರು ಮಾಡುತ್ತಿರುವ ಕೀಳು ಮಟ್ಟದ ಟೀಕೆಗಳಿಗೆ ಉತ್ತರಿಸಿದ ಮೃಣಾಲ್, ಒಬ್ಬ ಮಗನಾಗಿ ಯೋಚನೆ ಮಾಡಿದರೆ ಕೆಲವೊಂದು ಬಾರಿ ಬಹಳಷ್ಟು ಬೇಸರವಾಗುತ್ತದೆ. ಯಾಕೆಂದರೆ ಭೂಮಿ ಮೇಲಿನ ಪ್ರತಿಯೊಬ್ಬರಿಗೂ ಅವರ ತಾಯಿ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತನಾಡಿದರೆ ಸಹಜವಾಗಿ ಬೇಜಾರಾಗುತ್ತದೆ. ಈ ಟೀಕೆ-ಟಿಪ್ಪಣಿಗಳನ್ನು ಬಹಳ ವರ್ಷಗಳಿಂದ ಕೇಳಿದ್ದೇನೆ. ಆದರೆ, ಮೊನ್ನೆ ಓರ್ವ ಮಾಜಿ ಶಾಸಕರು ತಾಯಿ ಬಗ್ಗೆ ಬಹಳ ಕೀಳು ಮಟ್ಟದಿಂದ ಮಾತನಾಡಿದಾಗ, ಅನೇಕ ಹಿರಿಯ ಮುಖಂಡರು ವೇದಿಕೆ ಮೇಲಿದ್ದರು.
ಅಲ್ಲದೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಆಗ ಚಪ್ಪಾಳೆ ತಟ್ಟಿ, ನಕ್ಕಿದ್ದು ನೋಡಿದರೆ ಇದೇ ಅವರ ಹಿಡನ್ ಅಜೆಂಡಾ ಎಂಬ ಅನುಮಾನ ನನಗೆ ಮೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಾರೇ ಆಗಲಿ ಮಹಿಳೆಯರ ಬಗ್ಗೆ ಟೀಕಿಸಬಾರದು. ಬಿಜೆಪಿಯವರು ಬೇಟಿ ಬಚಾವ್, ಬೇಟಿ ಪಡಾವೊ ಎಂದು ಹೇಳುತ್ತೀರಿ. ಭಾರತೀಯ ನಾರಿ ನಮ್ಮ ಸಂಸ್ಕೃತಿ ಎನ್ನುತ್ತೀರಿ. ನೀವು ಟೀಕಿಸುವ ಪದಗಳು ನಮ್ಮ ಸಂಸ್ಕೃತಿಯಲ್ಲಿ ಬರೋದಿಲ್ಲ. ಹಾಗಾಗಿ, ರಾಜಕಾರಣದಲ್ಲಿ ಯಾವುದೇ ಮಹಿಳೆಯರಿಗೂ ಈ ರೀತಿ ಪದಗಳನ್ನು ಬಳಸಬಾರದು ಎಂದರು.
ಶೆಟ್ಟರ್ ಆಧಾರ್ ಕಾರ್ಡ್ ವಿಳಾಸ ಪ್ರಶ್ನಿಸಿದ ಮೃಣಾಲ್; ಜಗದೀಶ್ ಶೆಟ್ಟರ್ ಹೊರಗಿನವರು ಅನ್ನೋದನ್ನು ಜನ ಮರೆತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಮೃಣಾಲ್, ಶೆಟ್ಟರ್ ಹೊರಗಿನವರು ಅಂತಾ ಹೇಳಿದ್ದೇ ಬಿಜೆಪಿಯವರು. ಗೋಬ್ಯಾಕ್ ಶೆಟ್ಟರ್ ಅಭಿಯಾನ ಶುರು ಮಾಡಿದ್ದು ಇವರೇ ಅಲ್ಲವಾ? ಹಾಗಾಗಿ, ಇದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಹೇಗಾದರೂ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನಾನು ಅವರಿಗೆ ಕೇಳುತ್ತೇನೆ, ಶೆಟ್ಟರ್ ಅವರ ಆಧಾರ್ ಕಾರ್ಡ್ ಬೆಳಗಾವಿಯಲ್ಲಿ ಇದೆಯಾ? ಜನ ಬಹಳ ಹುಷಾರಾಗಿದ್ದಾರೆ. ಸ್ಥಳೀಯವಾಗಿ ಕೆಲಸ ಮಾಡುವ ವ್ಯಕ್ತಿಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಪ್ರತಿ ತಾಲೂಕಿಗೆ ಮುಟ್ಟಿಸಬೇಕಿದೆ. ಕೇಂದ್ರ ಸರ್ಕಾರದ ಬಹಳಷ್ಟು ಯೋಜನೆಗಳ ಬಗ್ಗೆ ಜನರಿಗೆ ಗೊತ್ತೇ ಇಲ್ಲ. ಮೊನ್ನೆ ರಾಮದುರ್ಗ, ಸವದತ್ತಿ ಕಡೆ ಹೋದಾಗ ಜನರು ಈ ರೀತಿಯೂ ಬದುಕುತ್ತಿದ್ದಾರಾ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಬಿಜೆಪಿಯವರು ಭಾರತ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎನ್ನುವ ರೀತಿ ಭಾಷಣ ಮಾಡುತ್ತಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ ಇದೆ. ಜನರ ತಲಾ ಆದಾಯ ಹೆಚ್ಚಿಸುತ್ತೇವೆ, ರೂಪಾಯಿ ಮೌಲ್ಯ ಸುಧಾರಿಸುತ್ತೇವೆ, ಪ್ರತಿ ಮನೆಗೆ ಶೌಚಾಲಯ ನಿರ್ಮಿಸುತ್ತೇವೆ ಎಂದಿದ್ದರು. ಆದರೆ, ಇವುಗಳನ್ನು ಈಡೇರಿಸಿದ್ದಾರಾ..? ಆಯುಷ್ಮಾನ್ ಕಾರ್ಡ್ನಲ್ಲಿ ಕೋವಿಡ್ ಚಿಕಿತ್ಸೆ ಯಾಕೆ ಸಿಗಲಿಲ್ಲ. ಹಾಗಾಗಿ, ಬಿಜೆಪಿಯ ಬಹಳಷ್ಟು ವೈಫಲ್ಯಗಳನ್ನು ತೆಗೆದುಕೊಂಡು ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಮೃಣಾಲ್ ತಿಳಿಸಿದರು.