ಮೈಸೂರು: ರಾಜ್ಯ ಸರ್ಕಾರ ರಚಿಸಿರುವ ಚಾಮುಂಡಿ ಬೆಟ್ಟ ಪ್ರಾಧಿಕಾರಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಧಾರ್ಮಿಕ ಪದ್ಧತಿಗಳಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು ಎಂದು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಿರುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ತಾಯಿ ಪ್ರಮೋದಾ ದೇವಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಕಾನೂನಾತ್ಮಕವಾಗಿ ಹೈಕೋರ್ಟ್ ಪ್ರಾಧಿಕಾರ ರಚನೆಗೆ ತಡೆ ನೀಡಿದೆ ಎಂದರು.
ಈಗಾಗಲೇ ಚಾಮುಂಡಿ ಬೆಟ್ಟದ ವಿಚಾರದಲ್ಲಿ ಮುಜರಾಯಿ ಇಲಾಖೆ ವಿರುದ್ದ ಕೇಸ್ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇದರ ನಡುವೆ ಪ್ರಾಧಿಕಾರ ರಚನೆ ಮಾಡಿರುವುದು ಕಾನೂನಾತ್ಮಕವಲ್ಲ ಎಂದು ಹೈಕೋರ್ಟ್ಗೆ ನಮ್ಮ ವಕೀಲರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಕೆಆರ್ಎಸ್ಗೆ ಆಗಸ್ಟ್ 15ರಂದು ಬಾಗಿನ ಅರ್ಪಿಸುತ್ತೇವೆ. ರಾಜ್ಯದಲ್ಲಿರುವ ಎಲ್ಲಾ ಡ್ಯಾಂಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕಿದೆ. ಕೆಆರ್ಎಸ್ ಜಲಾಶಯ ತುಂಬಾ ಹಳೆಯದು. ಅದರ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.