ಮೈಸೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ತನಿಖೆ ಎದುರಿಸಬೇಕು ಹಾಗೂ ಮುಡಾದ ಸಮಗ್ರ ಹಗರಣವನ್ನ ಸಿಬಿಐ ತನಿಖೆಗೆ ವಹಿಸಬೇಕೆಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.
ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಇಡಿ ದಾಳಿ ಮಾಡಿದೆ. ಈಗಾಗಲೇ ಮುಡಾ ಹಗರಣದಲ್ಲಿ 5 ಸಾವಿರ ಕೋಟಿ ಅಕ್ರಮ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರಲ್ಲಿ ಸಿಎಂ ಕುಟುಂಬ ನೇರವಾಗಿ ಭಾಗಿಯಾಗಿದೆ ಎಂಬುದಕ್ಕೆ ನಿವೇಶನವನ್ನಾ ವಾಪಸ್ ನೀಡಿರುವುದೇ ಸಾಕ್ಷಿಯಾಗಿದೆ. ಈ ಬಗ್ಗೆ ತನಿಖೆ ನಡೆಸಲು ಕೋರ್ಟ್ ಸಹ ಲೋಕಾಯುಕ್ತಕ್ಕೆ ತಿಳಿಸಿದೆ ಎಂದರು.
ಸಂಸದ ಯದುವೀರ್ ಒಡೆಯರ್ ಮಾತನಾಡಿದರು (ETV Bharat) ಈ ಮಧ್ಯೆ ಮುಡಾ ಕೇಸ್ಗೆ ಜಾರಿ ನಿರ್ದೇಶನಾಲಯ ಕೂಡ ಎಂಟ್ರಿಯಾಗಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತ ತನಿಖೆ ನಡೆಸಲು ಸಹಕಾರ ನೀಡಬೇಕು ಹಾಗೂ ಮುಡಾದ ಎಲ್ಲಾ ಹಗರಣವನ್ನು ಸಿಬಿಐಗೆ ವಹಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಇಡಿ ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ನಾಯಕರ ಆರೋಪ ಸರಿಯಲ್ಲ. ಇಡಿ ಸ್ವತಂತ್ರ ತನಿಖಾ ಸಂಸ್ಥೆ, ಯಾರ ಹಿಡಿತದಲ್ಲೂ ಇಲ್ಲ. ಅನೇಕ ಪ್ರಕರಣಗಳಲ್ಲಿ ಇಡಿ ನ್ಯಾಯ ಒದಗಿಸಿದೆ. ಅದೇ ರೀತಿ ಮುಡಾ ವಿಚಾರದಲ್ಲೂ ಹಣಕಾಸು ವಹಿವಾಟಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರಗೆ ತರುತ್ತದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದರು.
ಶಾಸಕ ಶ್ರೀವತ್ಸ ಹೇಳಿದ್ದೇನು : ಮುಡಾ ಪ್ರಕರಣದಲ್ಲಿ ಇಡಿ ದಾಳಿಯನ್ನ ನಾವು ಸ್ವಾಗತ ಮಾಡುತ್ತೇವೆ. ಜತೆಗೆ ಇಡಿ ಅಧಿಕಾರಿಗಳು, ಸಚಿವ ಬೈರತಿ ಸುರೇಶ್ ಮನೆಯ ಮೇಲೂ ದಾಳಿ ಮಾಡಿದರೆ, ಮುಡಾಗೆ ಸಂಬಂಧಿಸಿದಂತೆ ಹಲವು ದಾಖಲೆಗಳು ಅಲ್ಲೂ ಸಿಗಲಿವೆ. ಮುಡಾದಲ್ಲಿ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಎಲ್ಲಾ ನಿವೇಶನಗಳನ್ನ ವಾಪಸ್ ಪಡೆಯಬೇಕು. ಸೂರು ಇಲ್ಲದ ಜನರಿಗೆ ನಿವೇಶನ ಕೊಡಬೇಕು. ಮುಡಾದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ. ಮುಡಾ ಸದಸ್ಯತ್ವದಲ್ಲಿ ಶಾಸಕರ ಸದಸ್ಯತ್ವ ರದ್ದತಿಯ ಸರ್ಕಾರದ ನಿರ್ಧಾರವನ್ನ ಸ್ವಾಗತ ಮಾಡುತ್ತೇವೆ. ಮುಡಾಗೆ ದಕ್ಷ ಹಾಗೂ ಅನುಭವವುಳ್ಳ ಅಧಿಕಾರಿಯನ್ನ ಆಡಳಿತಾಧಿಕಾರಿಯಾಗಿ ನೇಮಿಸಬೇಕು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ವಚ್ಛವಾಗಬೇಕು ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದರು.
ಇದನ್ನೂ ಓದಿ :ಮುಡಾ ಕಚೇರಿಯಲ್ಲಿ ಇ.ಡಿ ಪರಿಶೀಲನೆ: ಸಂಸದ ಯದುವೀರ್, ಶಾಸಕ ಶ್ರೀವತ್ಸ ಹೇಳಿದ್ದೇನು?