ಕರ್ನಾಟಕ

karnataka

ETV Bharat / state

ಮೈಶುಗರ್​ ಕಾರ್ಖಾನೆಯನ್ನು ಯಾರೂ ಟಚ್​​ ಮಾಡಬಾರದು: ಸಂಸದೆ ಸುಮಲತಾ - ಮಂಡ್ಯ

ಮಂಡ್ಯದ ಮೈಶುಗರ್​ ಕಾರ್ಖಾನೆ ಕುರಿತು ಸಂಸದೆ ಸುಮಲತಾ ಅಂಬರೀಷ್​ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

MP Sumalatha Ambarish
ಸಂಸದೆ ಸುಮಲತಾ ಅಂಬರೀಷ್​

By ETV Bharat Karnataka Team

Published : Mar 4, 2024, 8:23 AM IST

Updated : Mar 4, 2024, 9:21 AM IST

ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ

ಮಂಡ್ಯ:"ಮೈಶುಗರ್​ ಕಾರ್ಖಾನೆಯನ್ನು ಯಾರೂ ಟಚ್​​ ಮಾಡಬಾರದು" ಎಂಬ ಎಚ್ಚರಿಕೆಯನ್ನು ಸಂಸದೆ ಸುಮಲತಾ ಅಂಬರೀಶ್ ನೀಡಿದ್ದಾರೆ. ಈ ಮೂಲಕ ಕಾರ್ಖಾನೆಯ ಬದಲು ಅಲ್ಲೇ ಬೇರೆ ಯೋಜನೆ ಹಾಕಿರುವ ಸರ್ಕಾರದ ನಿರ್ಧಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು.

"ಮೈಶುಗರ್​ ಕಾರ್ಖಾನೆಯ ವಿಚಾರದಲ್ಲಿ ಈ ಹಿಂದೆ ಭ್ರಷ್ಟಾಚಾರ ಆಗಿರುವುದು ಗೊತ್ತಿದೆ. ಕಾರ್ಖಾನೆಯಿಂದ ನೂರಾರು ಕೋಟಿ ರೂ ನಷ್ಟವಾಗಿದೆ. ಎಷ್ಟೇ ಹಣ ಹಾಕಿದರೂ ಫ್ಯಾಕ್ಟರಿ ಅಭಿವೃದ್ಧಿಯಾಗಲಿಲ್ಲ. ಹಾಗೇ ನನೆಗುದಿಗೆ ಬಿದ್ದಿತ್ತು. ನಾನು ಎಂಪಿಯಾದ ಬಳಿಕ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮೊದಲು ಅವರು ದೆಹಲಿಯಲ್ಲಿ ಮೀಟಿಂಗ್​ ಮಾಡಿದ್ದರು. ಅಲ್ಲಿ ನಾನು ಮಂಡ್ಯ ರೈತರ ಸಮಸ್ಯೆ ಬಗ್ಗೆ ತಿಳಿಸಿದ್ದೆ. ಯಡಿಯೂರಪ್ಪನವರು ಮಾತು ಕೊಟ್ಟಿದ್ದರು. ಬಳಿಕ ಸಿಎಂ ಆದ ಬಸವರಾಜ್​ ಬೊಮ್ಮಾಯಿ 50 ಕೋಟಿ ರೂ ಕೊಟ್ಟು ಕಾರ್ಖಾನೆ ಪುನರಾರಂಭಿಸಲು ಹೇಳಿದರು. ಇಂದಿನ ಸರ್ಕಾರ 100 ಕೋಟಿ ರೂ ಕೊಟ್ಟಿದೆ. ಆದರೆ ಇನ್ನೂ ಕೂಡ ಕಬ್ಬು ಅರೆಯುತ್ತಿಲ್ಲ. ಹಾಗಂತ ಕಾರ್ಖಾನೆಯನ್ನು ಕೆಡವಿ ಮತ್ತೆ 500 ಕೋಟಿಯ ಹೊಸ ಕಾರ್ಖಾನೆ ಅಂದರೆ ಏನರ್ಥ?. ಒಂದಲ್ಲ 5 ಕಾರ್ಖಾನೆ ಮಾಡಿ. ಆದರೆ ಮೈಶುಗರ್ ಕಾರ್ಖಾನೆ ಮಾತ್ರ ಮಂಡ್ಯಕ್ಕೆ ಪ್ರತಿಷ್ಠೆ" ಎಂದರು.

ಇದೇ ವಿಚಾರವಾಗಿ ಮುಂದುವರೆದು ಮಾತನಾಡಿದ ಸುಮಲತಾ, "ಇದು ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ. ಭಾವನಾತ್ಮಕ ಸಂಬಂಧವಿದೆ. ಆ 500 ಕೋಟಿಯನ್ನು ಈ ಕಾರ್ಖಾನೆಗೆ ಹಾಕಿ ಸರಿಪಡಿಸಿ. 500 ಕೋಟಿ ಬಜೆಟ್ ಇದ್ದಾಗ ಹಳೆಯದನ್ನೇ ಅಭಿವೃದ್ಧಿ ಮಾಡಿ. ಇದು ಉಪಯೋಗವಾಗುತ್ತಿಲ್ಲ ಎಂಬ ಕಾರಣಕ್ಕೆ ಕೆಡವಿ ಬೇರೆ ಏನೋ ಮಾಡುತ್ತೀರಿ ಎನ್ನುವುದಾದರೆ ಕೆಆರ್​ಎಸ್​ ಡ್ಯಾಂನಲ್ಲಿ ನೀರಿನ ಕೊರತೆ ಇದೆ. ಹಾಗಂತ ಅದನ್ನು ಬೇರೆ ಪಾರ್ಕ್ ಮಾಡುತ್ತೀರಾ?. ಎಷ್ಟೋ ಪ್ರಾಚೀನ ಕಾಲದ ದೇವಸ್ಥಾನ ಸರಿಯಾದ ಆಡಳಿತ ಇಲ್ಲದೇ ಹಾಗೇ ಬಿದ್ದಿದೆ. ಅಲ್ಲಿ ಬೇರೆ ಬಿಲ್ಡಿಂಗ್ ಕಟ್ಟುತ್ತೀರಾ?, ಇದಕ್ಕೆ ಜನ ಒಪ್ಪುತ್ತಾರಾ?" ಎಂದು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

"ಮೈಶುಗರ್ ಕಾರ್ಖಾನೆ O&Mಗೆ (ಸರ್ಕಾರ ಮತ್ತು ಖಾಸಗಿಯವರು ನಡೆಸುವುದು) ಯಡಿಯೂರಪ್ಪ ಕೊಡೋಣ ಅಂದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಹಾಗಾಗಿ ಗೊಂದಲ ಬೇಡ, ಸರ್ಕಾರಿ ಸ್ವಾಮ್ಯದಲ್ಲೇ ನಡೆಸೋಣ ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಕಾರ್ಖಾನೆಗೆ ಇಟ್ಟಿದ್ದ ದುಡ್ಡು ಎಲ್ಲಿಗೆ ಹೋಗಿದೆ?. ಇನ್ನು ಅಲ್ಲಿ ಹೊಸ ಕಾರ್ಖಾನೆ ನಿರ್ಮಿಸಿದರೆ ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. O&M ಇದ್ದರೆ ಸರ್ಕಾದರ ಜೊತೆಗೆ ಖಾಸಗಿ ಸೇರಿ ಕಾರ್ಖಾನೆ ಸರಿಯಾಗಿ ನಡಿಯುತ್ತಿತ್ತು. ಅವತ್ತು ನಾವೆಲ್ಲ ಇದ್ದೇವೆ, ನಾವು ನೋಡಿಕೊಳ್ಳುತ್ತೇವೆ ಅಂದವರು ಈಗ ಎಲ್ಲಿ?. ಇನ್ನು ಮೈಶುಗರ್ ಕಾರ್ಖಾನೆ ಪರಿಸ್ಥಿತಿ ಏನು?. ಖಂಡಿತವಾಗಿಯೂ ಈ ಬಗ್ಗೆ ನಾನು ಸಿಎಂಗೆ ಮನವಿ ಮಾಡುತ್ತೇನೆ. ಮೈಶುಗರ್ ಕಾರ್ಖಾನೆ ಉಳಿಸಿಕೊಳ್ಳಬೇಕು, ಇದು ನಮ್ಮೆಲ್ಲರ ಜವಾಬ್ದಾರಿ. ಬೇರೆ ಜಾಗದಲ್ಲಿ ಬೇಕಾದರೆ ಈಗಿನ ಸರ್ಕಾರದ ಯೋಜನೆಯಾದ ಸಾಫ್ಟ್‌ವೇರ್​ ಪಾರ್ಕ್ ಕಟ್ಟಲಿ. ಈ ಜಾಗದಲ್ಲಿ ಮಾತ್ರ ಮೈಶುಗರ್ ಕಾರ್ಖಾನೆ ಇರಲಿ" ಎಂದು ಒತ್ತಾಯಿಸಿದರು.

ಟಿಕೆಟ್​ಗೂ ಮೊದಲೇ ಸುಮಲತಾ ಫುಲ್ ಆ್ಯಕ್ಟಿವ್: ಲೋಕಸಮರಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಬಿಜೆಪಿ ಹೈಕಮಾಂಡ್​​​ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಸದ್ಯ ಬಿಜೆಪಿ ಟಿಕೆಟ್​ಗಾಗಿ ರೆಬಲ್ ಲೇಡಿ ದೆಹಲಿ ಮಟ್ಟದಲ್ಲಿ ದಾಳ ಉರುಳಿಸಿ, ಮಂಡ್ಯ ಬಿಜೆಪಿ ಟಿಕೆಟ್​ಗಾಗಿ ಸಾಕಷ್ಟು ಪ್ರಯತ್ನಪಡುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಮಂಡ್ಯ ಮೈತ್ರಿ ಟಿಕೆಟ್​ ಯಾರಿಗೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

ಆದರೆ ಹಾಲಿ ಸಂಸದೆ, ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಿಂದ ಮಂಡ್ಯ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಚುನಾವಣೆಯ ಪೂರ್ವದಲ್ಲಿ ಕ್ಷೇತ್ರದತ್ತ ಅಷ್ಟಾಗಿ ಬಾರದ ಅವರು, ತಿಂಗಳಿಗೆ ಒಮ್ಮೆ ಬಂದು ಹೋಗುತ್ತಿದ್ದರು. ಆದರೆ ಇದೀಗ 15 ದಿನಗಳಲ್ಲಿ 6ನೇ ಬಾರಿ ಮಂಡ್ಯ ಪ್ರವಾಸ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಘಟನೆಗೆ ಪ್ರತಿಕ್ರಿಯಿಸಿ, "ಬಾಂಬ್ ಸ್ಫೋಟ ಅತ್ಯಂತ ಭಯಾನಕ‌ ವಿಚಾರ. ಇದನ್ನು ಎಲ್ಲರೂ ಸೇರಿ ಖಂಡಿಸಬೇಕು. ಯಾರೂ ಸಮರ್ಥನೆ ಮಾಡಬಾರದು. ಆರೋಪಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಿಸಬೇಕು. ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಪೊಲೀಸರು ಆರೋಪಿಗಳನ್ನು ಬೇಗ ಬಂಧಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕಿಂತ ಹೆಚ್ಚಾಗಿ ಉಗ್ರವಾದಿ ಅಥವಾ ಆತಂಕವಾದಿಗಳು ಈ ರೀತಿಯ ಕೃತ್ಯಗಳನ್ನು ಮಾಡಲು ಪ್ರೋತ್ಸಾಹ ಸಿಗುತ್ತಿದೆ ಎಂಬ ಮಾತು ಬಂದೇ ಬರುತ್ತದೆ. ಯಾರೇ ಆದರೂ ಇದನ್ನು ಉತ್ತೇಜಿಸುವಂತೆ ಹೇಳಿಕೆ‌ ಕೊಡಬಾರದು" ಎಂದರು.

ಇದನ್ನೂ ಓದಿ:ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ: ಕೋಟ ಶ್ರೀನಿವಾಸ್ ಪೂಜಾರಿ

Last Updated : Mar 4, 2024, 9:21 AM IST

ABOUT THE AUTHOR

...view details