ಮೈಸೂರು:ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಬಾಂಬ್ ಬ್ಲಾಸ್ಟ್‌ಗಳು ಪ್ರಾರಂಭವಾಗಿವೆ. ಇದು ಟ್ರೈಲರ್ ಮಾತ್ರವೇ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ ಎಂದು ಸಂಸದ ಪ್ರತಾಪಸಿಂಹ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಜರ್ಬಾದ್ನಲ್ಲಿರುವ ಅಂಚೆ ಕಚೇರಿ ತರಬೇತಿ ಕೇಂದ್ರದಲ್ಲಿ ಮಹಿಳಾ ಹಾಸ್ಟೆಲ್ ಉದ್ಘಾಟಿಸಿ ಮಾತನಾಡಿದ ಅವರು, ಬಾಂಬ್ ಬ್ಲಾಸ್ಟ್‌ಗಳು ಶುರುವಾಗಿವೆ. ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ 10 ವರ್ಷಗಳ ಕಾಲ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆದಿದ್ದವು. ಚಿನ್ನಸ್ವಾಮಿ ಸ್ಟೇಡಿಯಂ, ಲುಂಬಿನಿ ಗಾರ್ಡನ್, ಜರ್ಮನ್ ಬೇಕರಿ, ಪುಣೆ, ಮುಂಬೈ, ಡೆಲ್ಲಿ, ಸೂರತ್ ಹೀಗೆ ದೇಶಾದ್ಯಂತ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆದಿದ್ದವು ಎಂದರು.
''ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಪ್ರಕರಣದ ಬಗ್ಗೆ ಮಾತನಾಡಿ, ನಾನು 2023ರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲೇ ಹೇಳಿದ್ದೆ. ನೀವು ಕಾಂಗ್ರೆಸ್ಗೆ ವೋಟ್ ಹಾಕಿದ್ರೆ ತಾಲಿಬಾನಿ ಸರ್ಕಾರ ಬರುತ್ತೆ ಅಂತಾ. ಇವತ್ತು ತಾಲಿಬಾನಿ ಸರ್ಕಾರ ನಡಿತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿ ಆಗಿವೆ. ವಿಧಾನಸೌಧದ ಒಳಗೆ ಪಾಕಿಸ್ತಾನ್ ಪರ ಘೋಷಣೆ ಮೊಳಗಿದೆ ಅಂದ್ರೆ ಯಾರು ಅಧಿಕಾರ ಮಾಡ್ತಿದ್ದಾರೆ ಅನ್ನೋದು ಸ್ಪಷ್ಟ ಆಗಿದೆ'' ಎಂದು ಕಿಡಿಕಾರಿದರು.
''ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಕೊಟ್ಟು ಗೆಲ್ಲಿಸಿ. ಆ ಮೂಲಕ ಈ ಸರ್ಕಾರ ತೊಲಗಲು ಅವಕಾಶ ಮಾಡಿಕೊಟ್ರೆ ಕರ್ನಾಟಕ ಉಳಿಯುತ್ತೆ. ಇಲ್ಲದಿದ್ರೆ ಗಂಡಾಂತರ ಕಾದಿದೆ. ಒಸಾಮಾಬಿನ್, ಮುಲ್ಲಾ ಉಮರ್‌ಜಾ ಅಂತಹವರು ಅಧಿಕಾರ ಮಾಡುವಾಗ ಬಾಂಬ್ ಹಾಕುವವರಿಗೆ ರಕ್ಷಣೆ ಕೊಡುತ್ತಾರೆ. ಅವರನ್ನು ಸೆರೆ ಹಿಡಿಯುವ ಕೆಲಸ ಮಾಡಲ್ಲ. ಇಷ್ಟೆಲ್ಲ ಆದರೂ ಎಫ್ಎಸ್ಎಲ್ ರಿಪೋರ್ಟ್ ಸೋಷಿಯಲ್ ಮೀಡಿಯಾದಲ್ಲಿ ತಿರುಚಿದ್ದಾರೆ ಅಂತ ಸಮರ್ಥಿಸಿಕೊಳ್ಳುವ ಅಗತ್ಯ ಏನಿದೆ'' ಎಂದು ಪ್ರತಾಪ್ಸಿಂಹ ಪ್ರಶ್ನಿಸಿದರು.
''ಸಿದ್ದರಾಮಯ್ಯ ಅವರೆ, ನೀವು ಅವರ ಕೈ ಕಡಿದರೂ ಸಹ ಅವರು ನಿಮಗೆ ಮತ ಹಾಕುತ್ತಾರೆ. ಮತ್ಯಾಕೆ ನೀವು ರಕ್ಷಣೆ ಮಾಡಲು ಹೊರಟಿದ್ದಿರಿ. ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತೆ ಯೋಚನೆ ಮಾಡಿ'' ಎಂದರು.
ಲೋಕಸಭಾ ಚುನಾವಣೆ: ಮೊದಲ ಪಟ್ಟಯಲ್ಲಿ ಕರ್ನಾಟಕದ ಕ್ಷೇತ್ರಗಳ ಹೆಸರು ಘೋಷಣೆ ಆಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪಸಿಂಹ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ರಾಜ್ಯಗಳಲ್ಲಿ ಹೆಸರು ಘೋಷಣೆ ಆಗಿದೆ. ಎಲ್ಲೆಲ್ಲಿ ಮೈತ್ರಿ ಇದೆಯೋ, ಅಲ್ಲಿನ ಕ್ಷೇತ್ರಗಳ ಹೆಸರು ಘೋಷಣೆ ಆಗಬೇಕು. ಮುಂದಿನ ದಿನಗಳಲ್ಲಿ, ಚರ್ಚೆ ನಡೆದು ಸೀಟ್ ಹಂಚಿಕೆ ಆದ ನಂತರ ಘೋಷಣೆ ಮಾಡಬೇಕಾಗುತ್ತೆ. ಕೇಂದ್ರ ನಾಯಕರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಎನ್ಐಎಗೆ ಹಸ್ತಾಂತರ; FIR ದಾಖಲು, ತನಿಖೆ ಆರಂಭ