ಉಡುಪಿ:ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಲಚ್ಚಿ ಪೂಜಾರ್ತಿ (97) ವರ್ಷ ಭಾನುವಾರದಂದು ವಯೋಸಹಜ ಅಸೌಖ್ಯದಿಂದ ಇಂದು ಇಹಲೋಕ ತ್ಯಜಿಸಿದರು.
ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿಯವರು ತನ್ನ ಯಶಸ್ವಿನಲ್ಲಿ ತಾಯಿಯ ಪಾತ್ರ ಮಹತ್ವದಿದೆ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ಇವರ ಅಗಲುವಿಕೆಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಉದ್ಯಮಿ ಆನಂದ ಸಿ. ಕುಂದರ್ ಸಹಿತ ರಾಜ್ಯ, ರಾಷ್ಟ್ರ ಮಟ್ಟದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕ್ಯಾಂಪ್ಕೊ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಲ್.ಎನ್. ಕೂಡೂರು ಇನ್ನಿಲ್ಲ:
ಬಂಟ್ವಾಳ: ಕ್ಯಾಂಪ್ಕೊ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಲ್.ಎನ್. ಕೂಡೂರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕ್ಯಾಂಪ್ಕೊ ಸಂಸ್ಥೆಯಲ್ಲಿದ್ದ ಕೇರಳ ಮತ್ತು ಕರ್ನಾಟಕ ಸರ್ಕಾರದ ಶೇರುಗಳನ್ನು ಯಾವುದೇ ವಿರೋಧಗಳಿಗೆ ಜಗ್ಗದೆ ಹಿಂದಿರುಗಿಸಿ ಕ್ಯಾಂಪ್ಕೊ ಸಂಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದ್ದರು. ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಎಲ್.ಎನ್. ಕೂಡೂರು (ETV Bharat) ವಿಟ್ಲ ಕಸಬಾ ಗ್ರಾಮದ ಕೂಡೂರು ನಿವಾಸಿಯಾಗಿದ್ದ ಎಲ್.ಎನ್. ಕೂಡೂರು (67) ಅವರು ಜೂ.30ರಂದು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ದೇಗುಲದ ಬ್ರಹ್ಮಕಲಶ ಸಂಭ್ರಮದ ರೂವಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು.
ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಯಾಂಪ್ಕೊ ಮಾಜಿ ಅಧ್ಯಕ್ಷರಾಗಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿ, ಶ್ರೀರಾಮಚಂದ್ರಾಪುರ ಮಠದ ಹೊಸನಗರ ಚಂದ್ರಮೌಳೀಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ, ವಿಟ್ಠಲ ಪಪೂ ಕಾಲೇಜು ಮತ್ತು ವಿಟ್ಠಲ ಪ್ರೌಢಶಾಲೆಯನ್ನೊಳಗೊಂಡ ವಿಟ್ಠಲ ವಿದ್ಯಾ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.