ಕರ್ನಾಟಕ

karnataka

ETV Bharat / state

ಮುನಿರತ್ನರ ತಲೆಕೂದಲು ಸ್ವಲ್ಪ ಸುಟ್ಟು ಹೋಗಿದೆ, ಸಿಟಿ ಸ್ಕ್ಯಾನ್​ ಮಾಡಿಸಲು ಸಲಹೆ ನೀಡಿದ್ದೇನೆ: ಸಂಸದ ಡಾ.ಮಂಜುನಾಥ್ - MP DR MANJUNATH EXAMINED MUNIRATHNA

ಬಿಜೆಪಿ ಶಾಸಕ ಮುನಿರತ್ನ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಾ.ಮಂಜುನಾಥ್​, ಸ್ವತಃ ತಾವೇ ಆರೋಗ್ಯ ತಪಾಸಣೆ ನಡೆಸಿದರು.

MP DR MANJUNATH RUSHED TO THE HOSPITAL AND EXAMINED MLA MUNIRATHNA
ಶಾಸಕ ಮುನಿರತ್ನ ಅವರ ತಪಾಸಣೆ ನಡೆಸಿದ ಸಂಸದ ಡಾ.ಮಂಜುನಾಥ್ (ETV Bharat)

By ETV Bharat Karnataka Team

Published : 23 hours ago

Updated : 22 hours ago

ಬೆಂಗಳೂರು: "ಮುನಿರತ್ನ ಅವರನ್ನು ಭೇಟಿ ಮಾಡಿ ನಾನೇ ತಪಾಸಣೆ ಮಾಡಿದೆ. ಅವರ ತಲೆಗೆ ಪೆಟ್ಟು ಬಿದ್ದಿದೆ. ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದಾಗ ವಾಂತಿ ಆಗಿದೆ. ಗಾಯಗೊಂಡ ಜಾಗದಲ್ಲಿ ಸ್ವಲ್ಪ ಕೂದಲು ಸುಟ್ಟು ಹೋಗಿದೆ. ಸಿಟಿ ಸ್ಕ್ಯಾನ್​ ಮಾಡಿಸಲು ಸಲಹೆ ನೀಡಿದ್ದೇನೆ. ಸಂಬಂಧಪಟ್ಟ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ಬಿಜೆಪಿ ಸಂಸದ ಡಾ.ಮಂಜುನಾಥ್​ ತಿಳಿಸಿದ್ದಾರೆ.

ಮೊಟ್ಟೆ ಏಟಿನ ಬಳಿಕ ಬಿಜೆಪಿ ಶಾಸಕ ಮುನಿರತ್ನ ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಡಾ.ಮಂಜುನಾಥ್​, ಮುನಿರತ್ನ ಅವರನ್ನು ತಪಾಸಣೆ ಮಾಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಶಾಸಕ ಮುನಿರತ್ನ ಅವರ ತಪಾಸಣೆ ನಡೆಸಿದ ಸಂಸದ ಡಾ.ಮಂಜುನಾಥ್ (ETV Bharat)

ಘಟನೆ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯವೆಸಗಿದ ಆರೋಪದಡಿ ಕೃಷ್ಣಮೂರ್ತಿ, ಚಂದ್ರು ಹಾಗೂ ವಿಶ್ವನಾಥ್ ಎಂಬವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಮೊಟ್ಟೆ ಎಸೆಯಲು ಕಾರಣವೇನು? ಆರೋಪಿತರ ಹಿನ್ನೆಲೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಧಾವಿಸಿರುವ ಪೊಲೀಸರು ಮುನಿರತ್ನರ ಹೇಳಿಕೆ ಪಡೆದುಕೊಂಡ ಬಳಿಕ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.

ಘಟನೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿರತ್ನ, ಆ್ಯಸಿಡ್ ಮೊಟ್ಟೆ ದಾಳಿ ನಡೆಸುವುದಾಗಿ ಬೆದರಿಕೆ ಬಂದಿರುವ ಅಂಶವನ್ನು ಉಲ್ಲೇಖಿಸಿದ್ದರು.

ಕಾರ್ಯಕರ್ತನ ಮೇಲೂ ಹಲ್ಲೆ:ಕೃತ್ಯದ ಸಂದರ್ಭದಲ್ಲಿ ತಮ್ಮ ಮೇಲೆಯೂ ಹಲ್ಲೆಯಾಗಿದೆ ಎಂದು ಕಾರ್ಯಕರ್ತ ಆನಂದ್ ಎಂಬವರು ದೂರಿದ್ದಾರೆ. ಬ್ಲೂಡಾರ್ಟ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಆನಂದ್, "ಇಂದು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಲಕ್ಷ್ಮೀದೇವಿ ನಗರಕ್ಕೆ ಮುನಿರತ್ನ ಅವರು ಬಂದಾಗ ಅವರೊಂದಿಗೆ ಹೋಗಿದ್ದೆ. ಈ ವೇಳೆ ಮೊಟ್ಟೆ ದಾಳಿಯಾಗಿದೆ. ಮೊಟ್ಟೆಯಲ್ಲಿದ್ದ ಕೆಮಿಕಲ್ ಎನ್ನಲಾಗುವ ದ್ರಾವಣ ನನ್ನ ಕಣ್ಣಿನ ಮೇಲೂ ಬಿದ್ದಿದೆ. ಇದರಿಂದ ತಕ್ಷಣ ನಾನು ಪ್ರಜ್ಞಾಹೀನನಾಗಿ ಕುಸಿದುಬಿದ್ದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದರು. ದೂರು ಕೊಡುವ ಬಗ್ಗೆ ಯೋಚಿಸುತ್ತಿದ್ದೇನೆ" ಎಂದಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯಿಸಿ, "ಇಂದು ಬೆಳಗ್ಗೆ 12.30ಕ್ಕೆ ಶಾಸಕ ಮುನಿರತ್ನ ಅವರು ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುವಾಗ ಘಟನೆ ನಡೆದಿದೆ. ಸುಮಾರು 15 ಮೀಟರ್ ದೂರದಿಂದ ಮೊಟ್ಟೆ ಎಸೆಯಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಡೆಯಿಂದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಕೂಡ ಶಾಸಕರಿಗೆ ಮೊದಲೇ ಕಾರಿನಲ್ಲಿ ಹೋಗುವಂತೆ ಸೂಚಿಸಿದ್ದರು. ಮುಖ್ಯರಸ್ತೆ ಹತ್ತಿರವಿದ್ದ ಕಾರಣ‌ ನಡೆದುಕೊಂಡು ಹೋಗಿದ್ದಾರೆ. ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು" ಎಂದು ತಿಳಿಸಿದರು.

ಇದನ್ನೂ ಓದಿ:ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ: ಮೂವರು ಕಿಡಿಗೇಡಿಗಳ ಬಂಧನ

Last Updated : 22 hours ago

ABOUT THE AUTHOR

...view details